ನವದೆಹಲಿ: ಬೃಹತ್ ನಿರುದ್ಯೋಗದ ಮೂಲಕ ಭಾರತದ (India) ಯುವಕರ ಭವಿಷ್ಯವನ್ನು ನಾಶಪಡಿಸಿದ ಮೋದಿ ಸರ್ಕಾರ (Modi Government) ಈಗ ಬಡ ಗ್ರಾಮೀಣ ಕುಟುಂಬಗಳಿಗೆ ವರವಾಗಿದ್ದ ಯೋಜನೆಯನ್ನೇ ಹಾಳು ಮಾಡಲು ಮುಂದಾಗಿದೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಆಕ್ರೋಶ ಹೊರಹಾಕಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಹೆಸರನ್ನು ದಿ ವಿಕಸಿತ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) ಎಂಬುದಾಗಿ ಮರುನಾಮಕರಣ ಮಾಡಿದ್ದಕ್ಕೆ ಎಕ್ಸ್‌ನಲ್ಲಿ ದೀರ್ಘ ಪೋಸ್ಟ್ ಮಾಡಿ ಸಿಟ್ಟು ಹೊರಹಾಕಿದ್ದಾರೆ.
ಮಹಾತ್ಮಾ ಗಾಂಧೀಜಿಯವರ ವಿಚಾರಗಳು ಮತ್ತು ಬಡವರ ಹಕ್ಕುಗಳು ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಸಹ್ಯವಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಇದನ್ನೂ ಓದಿ: ಲೋಕಸಭೆಯಲ್ಲಿ MNREGA ಹೆಸರು ಬದಲಿಸುವ ಮಸೂದೆ ಮಂಡನೆ, ಕೋಲಾಹಲ
Modi ji has a deep dislike for two things – the ideas of Mahatma Gandhi and the rights of the poor.
MGNREGA is the living embodiment of Mahatma Gandhi’s vision of Gram Swaraj. It has been a lifeline for millions of rural Indians and proved to be a crucial economic safety net…
— Rahul Gandhi (@RahulGandhi) December 16, 2025
ಪೋಸ್ಟ್‌ನಲ್ಲಿ ಏನಿದೆ?
ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ದೃಷ್ಟಿಕೋನದ ಜೀವಂತ ಸಾಕಾರವೇ MGNREGA ಯೋಜನೆ. ಇದು ಲಕ್ಷಾಂತರ ಗ್ರಾಮೀಣ ಭಾರತೀಯರ ಜೀವನಾಡಿಯಾಗಿದೆ ಮತ್ತು ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಉದ್ಯೋಗ ನೀಡುವ ಮೂಲಕ ಬಡವರಿಗೆ ನೆರವಾಗಿತ್ತು. ಇಷ್ಟೊಂದು ಉತ್ತಮ ಯೋಜನೆಯನ್ನು ಕಳೆದ ಹತ್ತು ವರ್ಷಗಳಿಂದ ಮೋದಿ ಸರ್ಕಾರ ವ್ಯವಸ್ಥಿತವಾಗಿ ದುರ್ಬಲಗೊಳಿಸಲು ಪ್ರಯತ್ನಿಸಿದೆ. ಈಗ MGNREGA ವನ್ನು ಸಂಪೂರ್ಣವಾಗಿ ಅಳಿಸಿಹಾಕಲು ಮೋದಿಯವರು ದೃಢನಿಶ್ಚಯ ಮಾಡಿದ್ದಾರೆ.
MGNREGA ಮೂರು ಮೂಲಭೂತ ತತ್ವಗಳ ಮೇಲೆ ಕೆಲಸ ಮಾಡುತ್ತದೆ. ಕೆಲಸ ಕೇಳುವ ಯಾರಿಗಾದರೂ ಉದ್ಯೋಗ ನೀಡಬೇಕು. ಹಳ್ಳಿಗಳು ತಮ್ಮ ಅಭಿವೃದ್ಧಿ ಕಾರ್ಯ ಮಾಡಲು ಸಂಪೂರ್ಣ ಅಧಿಕಾರ ಮತ್ತು ಕೇಂದ್ರ ಸರ್ಕಾರ ಸಂಪೂರ್ಣ ವೇತನ ಮತ್ತು ವಸ್ತು ವೆಚ್ಚದ 75% ಹಣವನ್ನು ನೀಡುತ್ತಿತ್ತು. ಆದರೆ ಈಗ ಮೋದಿ ಸರ್ಕಾರ MGNREGA ಅನ್ನು ಸಂಪೂರ್ಣ ಕೇಂದ್ರದ ನಿಯಂತ್ರಣದಲ್ಲಿರುವಂತೆ ರೂಪಿಸಿದೆ. ಇದನ್ನೂ ಓದಿ: MGNREGA ಬದಲು G RAM G – ಶೀಘ್ರವೇ ಮಂಡನೆಯಾಗಲಿದೆ ಉದ್ಯೋಗ ಖಾತರಿ ಮಸೂದೆ
ಹೊಸ ಮಸೂದೆಯಲ್ಲಿ ಬಜೆಟ್, ಯೋಜನೆ ಮತ್ತು ನಿಯಮವನ್ನು ಕೇಂದ್ರ ಸರ್ಕಾರ ಸಿದ್ಧಪಡಿಸಿದೆ. ರಾಜ್ಯಗಳು ವೆಚ್ಚದ 40% ಅನ್ನು ಭರಿಸಬೇಕಾಗುತ್ತದೆ. ನಿಧಿ ಖಾಲಿಯಾದ ನಂತರ ಅಥವಾ ಕೃಷಿಯಲ್ಲಿ ತೊಡಗಿದ ಸಮಯದಲ್ಲಿ ಕಾರ್ಮಿಕರಿಗೆ ತಿಂಗಳುಗಳವರೆಗೆ ಉದ್ಯೋಗ ನಿರಾಕರಿಸಲಾಗುತ್ತದೆ.
ಮಹಾತ್ಮ ಗಾಂಧಿಯವರ ಆದರ್ಶಗಳಿಗೆ ಅವಮಾನವಾಗುವಂತೆ ಮಸೂದೆ ಸಿದ್ಧಪಡಿಸಲಾಗಿದೆ. ಬೃಹತ್ ನಿರುದ್ಯೋಗದ ಮೂಲಕ ಭಾರತದ ಯುವಕರ ಭವಿಷ್ಯವನ್ನು ನಾಶಪಡಿಸಿದ ಮೋದಿ ಸರ್ಕಾರ ಈಗ ಬಡ ಗ್ರಾಮೀಣ ಕುಟುಂಬಗಳ ಸುರಕ್ಷತೆ ಖಾತರಿ ಪಡಿಸುವ ಯೋಜನೆಯನ್ನೇ ನಾಶ ಮಾಡಲು ಮುಂದಾಗಿದೆ. ಬೀದಿಯಿಂದ ಸಂಸದ್‌ವರೆಗೆ ನಾವು ಈ ಜನ ವಿರೋಧಿ ಮಸೂದೆಯನ್ನು ವಿರೋಧಿಸುತ್ತೇವೆ ಎಂದು ಗುಡುಗಿದ್ದಾರೆ.

