ಚಿತ್ರದುರ್ಗ: ತುಮಕೂರಿನ ಪಾವಗಡ ಸೋಲಾರ್ ಪಾರ್ಕ್ ನೋಡಿ ಪ್ರಧಾನಿ ಮೋದಿ ಗಾಬರಿಯಾಗಿದ್ದಾರೆ ಎಂದು ಇಂಧನ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ಜಿಲ್ಲೆಯ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವದ ಅತೀ ದೊಡ್ಡ ಸೋಲಾರ್ ಪಾರ್ಕ್ ಪಾವಗಡದಲ್ಲಿ ನಿರ್ಮಾಣವಾಗುತ್ತಿದೆ. ಜಮೀನು ಖರೀದಿ ಮಾಡದೇ, ಭೂ ಸ್ವಾಧೀನವೂ ಇಲ್ಲದೆ, 12 ಸಾವಿರ ಎಕರೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣವಾಗುತ್ತಿದೆ. ಇದನ್ನು ಕಂಡು ಪ್ರಧಾನಿ ಮೋದಿ ಅವರೇ ಗಾಬರಿಯಾಗಿದ್ದಾರೆ ಎಂದು ಹೇಳಿದರು.
ಸರ್ಕಾರ ಆರಂಭದಲ್ಲಿ ತಮಗೇ ಸಚಿವ ಸ್ಥಾನ ನೀಡಿರಲಿಲ್ಲ. ನಾನು ಕಳಂಕಿತ ಎಂದು ದೂರು ಕೊಟ್ಟ ಕಾರಣಕ್ಕೆ ಆರಂಭದಲ್ಲಿ ಸಚಿವ ಸ್ಥಾನ ಸಿಗಲಿಲ್ಲ. ನಂತರದಲ್ಲಿ ಸತ್ಯಾಂಶ ತಿಳಿದು ಇಂಧನ ಇಲಾಖೆ ಜವಾಬ್ದಾರಿ ನೀಡಿದರು. ಅನೇಕರು ಶೋಭಕ್ಕ ಉಗಿಸಿಕೊಂಡಿದ್ದು ಆಯ್ತು. ಇನ್ನೂ ನೀನು ಏಕೆ ಇಂಧನ ಇಲಾಖೆ ತೆಗೆದುಕೊಳ್ಳುತ್ತೀರಾ ಎಂದರು. ಅದರೂ ನಾನು ಈ ವೇಳೆ ಕಷ್ಟವಾದ ಇಲಾಖೆ ನಿಭಾಯಿಸಿಯೇ ಹೋಗಬೇಕು ಎಂಬ ಕಾರಣಕ್ಕೆ ಇಂಧನ ಇಲಾಖೆ ವಹಿಸಿಕೊಂಡೆ. ಈಗ ಈ ಇಲಾಖೆಯನ್ನು ನಾನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಎಂದು ಹೇಳಿದರು.
ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡಲು ಮನಸ್ಸಿಲ್ಲ. ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ರಾಜ್ಯದ ಸರ್ಕಾರ ರೈತರ ಸಾಲ ಮನ್ನಾ ಮಾಡಿದರೆ ಅದನ್ನು ಲಾಲಿಪಪ್ ಎಂದಿದ್ದಾರೆ. 50 ಸಾವಿರ ಲಾಲಿಪಪ್ ಸರ್ಕಾರ ನೀಡಿದೆ. ನೀವು ಕೇಂದ್ರದವರು ಕನಿಷ್ಟ ಚಾಕೊಲೇಟ್ ಆದರು ನೀಡಿ ಎಂದರು. ಇದನ್ನೂ ಓದಿ: ಮೆಗಾ ಸೋಲಾರ್ ಹಗರಣ – ಡಿಕೆಶಿ ವಿರುದ್ಧ ಇಡಿಗೆ ದೂರು
ಬಿಜೆಪಿಯವರು ಅವರೇ ಪರಿವರ್ತನೆ ಮಾಡಿಕೊಳ್ಳುತ್ತಿದ್ದಾರೆ. ಮೋದಿ ನೋಡಿಕೊಂಡು ಮತ ಹಾಕುತ್ತಾರೆ ಅಂದುಕೊಂಡಿದ್ದಾರೆ. ಆದರೆ ಜನ ಹೋದ ಕಡೆ ಎಲ್ಲಾ ಖಾತೆಗೆ 15 ಲಕ್ಷ ನೀಡಿ ಎನ್ನುತ್ತಿದ್ದಾರೆ. ಅಧಿಕಾರಲ್ಲಿ ಇದ್ದಾಗ ಜೈಲಿಗೆ ಹೋಗಿ, ಬ್ಲೂಫಿಲಂ ನೋಡಿ ಎಂದು ಯಾರು ಹೇಳಿದ್ದರು. ಯಡಿಯೂರಪ್ಪ ಸೈಕಲ್ ಕೊಟ್ಟೆ, ಸೀರೆ ಕೊಟ್ಟೆ ಎನ್ನುತ್ತಿದ್ದಾರೆ. ಅದನ್ನು ಬಿಟ್ಟು ಬೇರೆ ಏನು ಹೇಳುತ್ತಿಲ್ಲ. ರಾಜ್ಯದ ಜನರು ಗುರುತಿಸುವಂತಹ ಒಂದು ಕಾರ್ಯಕ್ರಮ ನೀಡಿಲ್ಲ ಎಂದರು.
ಇದೇ ವೇಳೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚಿಸಿದ ಅವರು, ಸಿಎಂ ಸಿದ್ದರಾಮಯ್ಯ ನಮ್ಮ ಪಕ್ಷಕ್ಕೆ ಬರುವುದಕ್ಕಿಂತ ಮೊದಲಿಂದಲೂ ನಾನು ಗೋವಿಂದಪ್ಪನವರು ಸ್ನೇಹಿತರು. ಕಳೆದ ಐದು ವರ್ಷದಲ್ಲಿ ನಿಮ್ಮ ಕೆಲಸ ಮಾಡಿದ್ದೇವೆ ಕೂಲಿ ಕೊಡಿ ಎಂದು ಕೇಳುತ್ತಿದ್ದೇವೆ. ನಾನು 6 ಬಾರಿ ಗೆಲವು ಪಡೆದಿದ್ದೇನೆ, ಗೋವಿಂದಪ್ಪರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಭಾಷಣದ ವೇಳೆ ಜಾವಡೇಕರ್ ಬದಲು ಜಾವೀದ್ ಎಂದ ಡಿಕೆ ಶಿವಕುಮಾರ್
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ, ಸಿದ್ದರಾಮಯ್ಯ ನಮ್ಮ ನಾಯಕ ಅವರ ನಾಯಕತ್ವದಲ್ಲೇ ಚುನಾವಣೆಗೆ ಎದುರಿಸುತ್ತೇವೆ. ಮಹದಾಯಿ ವಿಚಾರದಲ್ಲಿ ನಾವು ಕಾನೂನು ಬಿಟ್ಟು ಏನು ಮಾಡಿಲ್ಲ. ಆದರೆ ಗೋವಾ ಸಚಿವ ಪ್ಯಾಲೆಕರ್ ಸುಮ್ಮನೆ ಮಹದಾಯಿ ವಿಚಾರವಾಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ದೂಷಿಸಿದರು.