-ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಚಿತ್ರದಲ್ಲಿ ಮೋದಿ ಮಿಂಚಿಂಗ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಲಾವಿದರೊಬ್ಬರು ಮೋದಿಯ ಅಪರೂಪದ ಹಾಗೂ ಬಗೆ ಬಗೆಯ 3000 ಚಿತ್ರಗಳನ್ನು ಸಂಗ್ರಹಿಸಿದ ಅಭಿಮಾನ ಮೆರೆದಿದ್ದಾರೆ.
ಯಲ್ಲಾಪುರ ತಾಲೂಕಿನ ಕಲಾವಿದರಾಗಿರುವ ಜಾಲಿಮನೆ ವೆಂಕಣ್ಣ ಅವರು ಚಿಕ್ಕ ವಯಸ್ಸಿನಿಂದಲೇ ಕಲೆ ಬಗ್ಗೆ ಒಲವು ಹೊಂದಿದ್ದು, ಕಲಾಕೃತಿ ರಚನೆ ಸಂಗ್ರಹಣೆ ಮಾಡುವುದೇ ಹವ್ಯಾಸವಾಗಿದೆ. ಮೋದಿ ಮೇಲಿನ ಇವರ ಅಭಿಮಾನದಿಂದ ಕಳೆದ ಎಂಟು ತಿಂಗಳಿಂದ ಮೋದಿ ಅವರ ಭಾವ ಚಿತ್ರಗಳನ್ನು ಸಂಗ್ರಹಿಸಿ ಪ್ರದರ್ಶನ ಮಾಡುವ ಕೆಲಸ ಮಾಡ್ತಿದ್ದಾರೆ. ಮೋದಿಯವರನ್ನು ನೇರವಾಗಿ ನೋಡದಿದ್ದರೂ ಅವರ ಕಾರ್ಯ ಸಾಧನೆಯನ್ನು ನೋಡಿ ವೆಂಕಣ್ಣ ಅವರು ಅಭಿಮಾನಿಯಾಗಿದ್ದಾರೆ.
Advertisement
Advertisement
ಮೋದಿ ಮೇಲಿನ ಅಭಿಮಾನಕ್ಕೆ ವೆಂಕಣ್ಣ ಪ್ರಧಾನಿಯ ಪ್ರತಿಯೊಂದು ಪೋಟೋಗಳನ್ನು ಸಂಗ್ರಹಿಸಿ ಮನೆಯನ್ನೇ ಮೋದಿ ಭಾವಚಿತ್ರಗಳ ಕಲಾ ಸಂಗ್ರಹಾಲಯವನ್ನಾಗಿಸಿ ಅಭಿಮಾನ ಮೆರೆದಿದ್ದಾರೆ. ಪತ್ರಿಕೆಯಲ್ಲಿ ಪ್ರಕಟವಾಗುವ ಮೋದಿ ಭಾವಚಿತ್ರದಿಂದ ಹಿಡಿದು ಮಲೆನಾಡ ಕಲೆ ಯಕ್ಷಗಾನ, ಕ್ರಿಕೆಟ್ ಆಟಗಾರ, ಕಾರ್ಟೂನ್ ಸೇರಿದಂತೆ ಹಲವು ರೂಪದಲ್ಲಿ ಮೋದಿಯನ್ನು ಅವರು ಚಿತ್ರಿಸುವ ಕೆಲಸ ಮಾಡಿದ್ದಾರೆ. ಮೋದಿಯ ಬಾಲ್ಯದ ಚಿತ್ರಗಳಿಂದ ಹಿಡಿದು ನಾನಾ ವೇಷದಲ್ಲಿ ಕಂಗೊಳಿಸುವ ಬಗೆ, ಬಗೆ ಬಂಗಿಯ ಚಿತ್ರಗಳನ್ನ ಅವರು ಸಂಗ್ರಹಿಸಿದ್ದಾರೆ.
Advertisement
Advertisement
ಮೋದಿಯ ಚಿತ್ರ ಎಲ್ಲೇ ಕಂಡರೂ ತಂದು ಅವುಗಳನ್ನು ಅಚ್ಚುಕಟ್ಟಾಗಿ ಜೋಡಿಸಿ ರಟ್ಟಿನಲ್ಲಿ ಲ್ಯಾಮಿನೇಷನ್ ಮಾಡಿ ಇಡುತ್ತಿದ್ದಾರೆ. ಹೀಗೆ ಬರೋಬ್ಬರಿ 3000 ಕ್ಕೂ ಹೆಚ್ಚು ಸಂಗ್ರಹಿಸಿದ್ದು, ಇವುಗಳನ್ನು ತಮ್ಮ ಮನೆಯ ತುಂಬಾ ನೀಟಾಗಿ ಜೋಡಣೆ ಮಾಡಿ ಮೋದಿ ಭಾವಚಿತ್ರಗಳನ್ನು ಮನೆಗೆ ಬರುವವರಿಗೆಲ್ಲ ತೋರಿಸಿ ಮೋದಿಯ ಜೀವನ ಹಾಗೂ ಸಾಧನೆಗಳನ್ನು ತಿಳಿಸುವ ಕೆಲಸ ಮಾಡ್ತಿದ್ದಾರೆ. ಅಲ್ಲದೇ ಸಂಬಂಧಿಕರ ಮದುವೆ, ಮುಂಜಿಗಳಂದು ಅಶ್ವಥ ಎಲೆ ಮೇಲೆ ಮೋದಿ ಚಿತ್ರ ಬಿಡಿಸಿ ಉಡುಗರೆ ನೀಡಿ ಅಭಿಮಾನ ತೋರುತ್ತಿದ್ದಾರೆ.
ಅಶ್ವಥ ಮರಕ್ಕೆ ಧಾರ್ಮಿಕವಾದ ಮಹತ್ವವಿದೆ ತ್ರಿಮೂರ್ತಿಗಳ ಸಂಗಮ ಅಶ್ವಥ ಎಲೆ. ಸನ್ಯಾಸಿಯಾದ ಮೋದಿಯನ್ನ ನೋಡಿದಾಗ ದೇಶಾಭಿನ ಜಾಗೃತ ಆಗುತ್ತೆ. ಈ ಹಿನ್ನೆಲೆಯಲ್ಲಿ ಮೋದಿಯನ್ನ ಅಶ್ವಥ ಎಲೆಯಲ್ಲಿ ಸಂಗ್ರಹಿಸುವ ಮನಸ್ಸು ಬಂತು ಎಂದು ಕಲಾವಿದ ವೆಂಕಣ್ಣ ಹೇಳಿದ್ದಾರೆ.
ಇನ್ನು ಮೋದಿಯ ವಿಶೇಷ ಚಿತ್ರಗಳ ಸಂಗ್ರಹ ನೋಡಲು ಸುತ್ತ ಮುತ್ತಲಿನ ಜನರೂ ಮುಗಿಬೀಳುತ್ತಿದ್ದಾರೆ, ಮೋದಿ ಚಿತ್ರ ಸಂಗ್ರಹ ನೋಡಿ ಖುಷಿಪಡುವ ಜನರು ವೆಂಕಣ್ಣ ಅವರು ಮೋದಿ ಬಗ್ಗೆ ಇಟ್ಟಿರುವ ಅಪಾರ ಭಕ್ತಿ, ಪ್ರೀತಿಯನ್ನು ಮೆಚ್ಚಿದ್ದಾರೆ.