ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಹಾಗು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು ಸರಿಯಲ್ಲವೆಂದು ಮಾಜಿ ಸಚಿವ ಹಾಗೂ ಸಿದ್ದರಾಮಯ್ಯನವರ ಆಪ್ತ ಹೆಚ್. ಆಂಜನೇಯ ಅವರು ದೋಸ್ತಿ ಸರ್ಕಾರದ ವಿರುದ್ಧ ಅಪಸ್ವರ ಎತ್ತಿದ್ದಾರೆ.
ಚಿತ್ರದುರ್ಗ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಮಾಜಿ ಸಂಸದ ಚಂದ್ರಪ್ಪನೊಂದಿಗೆ ಇಂದು ಆಂಜನೇಯ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಆಂಜನೇಯ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಎರಡು ಪಕ್ಷಗಳ ಮೈತ್ರಿ ಕೇವಲ ಸರ್ಕಾರಕ್ಕೆ ಸೀಮಿತವಾಗಬೇಕಿತ್ತು. ಲೋಕಸಭಾ ಚುನಾವಣೆಗೆ ಈ ಮೈತ್ರಿ ಅಗತ್ಯವಿರಲಿಲ್ಲ. ಮೈತ್ರಿಯಿಂದ ಕಾಂಗ್ರೆಸ್ಸಿಗೆ ಆಗಲಿ, ಜೆಡಿಎಸ್‍ಗೆ ಆಗಲಿ ಯಾವುದೇ ಫಲ ಸಿಕ್ಕಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಈ ಮೈತ್ರಿ ಕೇವಲ ಕಾಂಗ್ರೆಸ್ ಹಾಗು ಜೆಡಿಎಸ್ ಪಕ್ಷಗಳ ವರಿಷ್ಟರ ಮಟ್ಟದಲ್ಲಿ ಮಾತ್ರ ಆಗಿದೆಯೇ ಹೊರತು, ಎರಡು ಪಕ್ಷಗಳ ಕಾರ್ಯಕರ್ತರು ಮತ್ತು ಮುಖಂಡರ ಮಟ್ಟದಲ್ಲಿ ಮೈತ್ರಿಯಾಗಿಲ್ಲ. ಹೀಗಾಗಿ ನಾವು ಈ ಚುನಾವಣೆಯಲ್ಲಿ ಸೋತಿದ್ದೇವೆ. ಆದ್ದರಿಂದ ಎರಡು ಪಕ್ಷಗಳು ಪರಸ್ಪರ ಅವಲೋಕನ ಮಾಡಿಕೊಳ್ಳಬೇಕಿದ್ದು, ಈ ಮೈತ್ರಿಯಿಂದ ಎರಡೂ ಪಕ್ಷಗಳ ಮೇಲು ಎಫೆಕ್ಟ್ ಆಗಿದೆ ಎಂದು ಅಸಮಾಧಾನ ಹೊರಹಾಕಿದರು.
Advertisement
Advertisement
ಇದೇ ವೇಳೆ ಪ್ರಧಾನಿ ಗೆಲುವಿನ ನಾಗಲೋಟದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದಲ್ಲಿ ಜನರನ್ನು ಮೋದಿ ವಶೀಕರಣ ಮಾಡಿಕೊಂಡು ಈ ಚುನಾವಣೆ ಗೆದ್ದಿದ್ದಾರೆ. ಇದು ನಿಜವಾದ ಗೆಲುವಲ್ಲ. ಈ ಕೇಂದ್ರ ಸರ್ಕಾರ 2014ರಲ್ಲಿ ಕೊಟ್ಟ ಭರವಸೆಗಳನ್ನೇ ಈಡೇರಿಸಿಲ್ಲ. ಆದರೆ ಈ ಚುನಾವಣೆಯಲ್ಲಿ ಬಂಡವಾಳ ಶಾಹಿಗಳ ಹಣದಿಂದ ಮಾರ್ಕೆಟಿಂಗ್ ಮಾಡಿಕೊಂಡು ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿದೆ ಅಂತ ಆರೋಪಿಸಿದರು.
ಬಣ್ಣ ಬಣ್ಣದ ಮಾತುಗಳನ್ನು ಆಡಿ ಗೆದ್ದಿರೋ ಮೋದಿ, ತಾವು ಪ್ರಚೋದನೆ ಮಾಡಲು ಮಾತನಾಡಿದಂತೆ ಆಡಳಿತ ನಡೆಸಲಿ. ರಾಜಕೀಯಕ್ಕಾಗಿ ದೇಶದ ಜನರನ್ನ ಪ್ರಚೋದಿಸಿದರೆ ಸರಿಯಿರಲ್ಲ ಎಂದು ಆಂಜನೇಯ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.