ಕಲಬುರಗಿ: ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರಿಂದ ಹಿಡಿದು ಎಲ್ಲ ಬಿಜೆಪಿ ನಾಯಕರು ಶತಪ್ರಯತ್ನ ನಡೆಸಿದ್ದಾರೆ ಎಂದು ಲೋಕಸಭೆ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ ಅವರು, ಪ್ರಜಾಪ್ರಭುತ್ವದಲ್ಲಿ ಆಯ್ಕೆಯಾದ ಸರ್ಕಾರವನ್ನು ಈ ರೀತಿ ಉರುಳಿಸಲು ಪ್ರಯತ್ನ ನಡೆಸುವುದು ಸ್ವಾಗತರ್ಹವಲ್ಲ. ಇದೇ ರೀತಿ ಈ ಹಿಂದೆ ಮಣಿಪುರ ಹಾಗೂ ಉತ್ತರಖಂಡ ಸರ್ಕಾರವೂ ಮಾಡಿತ್ತು. ಮತ್ತೆ ಅದೇ ಮಾದರಿಯಲ್ಲಿ ಇಲ್ಲಿ ಕೂಡ ಅಧಿಕಾರಕ್ಕೆ ಬರಲು ಯತ್ನಿಸುತ್ತಿದ್ದಾರೆ. ಆದರೆ ಇದು ಅವರಿಗೆ ಫಲಪ್ರದ ನೀಡುವುದಿಲ್ಲ ಎಂದು ಕಿಡಿಕಾರಿದರು.
Advertisement
Advertisement
ಆಪರೇಷನ್ ಕಮಲ ನಡೆಯುತ್ತಿರುವ ಬಗ್ಗೆ ಸಾಕ್ಷಿ ಇರುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನು ಎಸಿಬಿ ಗಂಭೀರವಾಗಿ ಪರಿಗಣಿಸಬೇಕು. ಆಗ ಮುಂದಿನ ಅವಧಿಯಲ್ಲಿ ಇಂತಹ ಕೆಲಸಕ್ಕೆ ಕೈ ಹಾಕಲು ಆಗುವುದಿಲ್ಲ ಎಂದರು. ಅಲ್ಲದೇ ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಬಳಿ ಮಾತನಾಡಿದ್ದೇನೆ. ಪಕ್ಷದಿಂದ ನಾಲ್ಕು ಶಾಸಕರು ಹೋಗಿರಬಹುದು ಅಷ್ಟೇ, ಇನ್ನುಳಿದ ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
ಕಲಬುರಗಿ ಲೋಕಸಭಾ ಚುನಾವಣೆಯಲ್ಲಿ ಶಾಸಕ ಉಮೇಶ್ ಜಾಧವ್ ಸ್ಪರ್ಧೆ ಹಿನ್ನಲೆ ಕುರಿತು ಪ್ರತಿಕ್ರಿಯೆ ನೀಡಿ, ಜಾಧವ್ ಅವರು ಸ್ಪರ್ಧೆ ಮಾಡುವುದಾದರೆ ಮಾಡಲಿ, ಅದಕ್ಕೆ ನಮ್ಮ ಸ್ವಾಗತ ಇದೆ. ಈ ಮೂಲಕವಾದರೂ ಕಲಬುರಗಿ ಜನರತ್ತ ನೋಡುವಂತಾಗಬಹುದು ಎಂದು ವ್ಯಂಗ್ಯವಾಗಿ ಕುಟುಕಿದರು.
Advertisement
ಪ್ರಧಾನಿ ವಿರುದ್ಧ ಏಕವಚನ ಪ್ರಯೋಗ: ಕೇಂದ್ರ ಸರ್ಕಾರದ ಹಗರಣದ ಬಗ್ಗೆ ಸದನದಲ್ಲಿ ಗಮನ ಸೆಳೆಯಲು, ನಾನು ಬಸವಣ್ಣ ನವರ ವಚನವನ್ನು ಪ್ರಸ್ತಾಪಿಸಿದ್ದೇನೆ. 16ನೇ ಲೋಕಸಭೆಯಲ್ಲಿ ಮಾಡಿದ ಭಾಷಣವನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ನಾನು ಇದೇ ಮೊದಲ ಬಾರಿಗೆ ವಚನಗಳನ್ನು ಸದನದಲ್ಲಿ ಪ್ರಸ್ತಾಪ ಮಾಡಿಲ್ಲ. ಈ ಹಿಂದೆಯೂ ಕೂಡ ರೈಲ್ವೇ ಬಜೆಟ್ ಮಂಡಿಸುವ ವೇಳೆ ವಚನಗಳನ್ನು ಪ್ರಸ್ತಾಪ ಮಾಡಿದ್ದೆ ಎಂದರು.
ಮೋದಿ ತಮ್ಮ ಪ್ರತಿ ಭಾಷಣದಲ್ಲೂ ‘ಸತ್ತರ್ ಸಾಲ್ ಕ್ಯಾ ಕಿಯಾ ಅಂತಾ’ ಪ್ರಶ್ನೆ ಮಾಡುತ್ತಿದ್ದಾರೆ. ನಮಗೆ ಬೈಯ್ಯುವ ಭರಾಟೆಯಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮೊರಾರ್ಜಿ ದೇಸಾಯಿ ಅವರನ್ನು ಬೈಯುತ್ತಿದ್ದಾನೆ. ಈ ಮೂಲಕ ಜನರು, ಯುವಕರ ದಿಕ್ಕು ತಪ್ಪಿಸಲು ಪ್ರಯತ್ನಿಸಲಾಗುತ್ತಿದೆ. ನನ್ನ ಭಾಷಣದಲ್ಲಿ ಕಳಬೇಡ, ಕೊಲಬೇಡ ಎಂಬ ವಚನ ಹೇಳಿ ಪ್ರಧಾನಿ ಮೋದಿಗೆ ಹೇಳಿದೆ, ಆದರೆ ಇವೆಲ್ಲಾ ಗುಣಗಳು ಅವನಲ್ಲಿವೆ ಎಂದು ಪ್ರಧಾನಿ ಮೋದಿ ವಿರುದ್ಧ ಏಕವಚನದಲ್ಲೇ ಖರ್ಗೆ ವಾಗ್ದಾಳಿ ನಡೆಸಿದರು. ಅಲ್ಲದೇ 1977 ರಲ್ಲಿ ಇಂಧಿರಾ ಗಾಂಧಿ ಅವರ ತುರ್ತು ಪರಿಸ್ಥಿತಿಯನ್ನು ಮುಂದಿಟ್ಟು ಅಧಿಕಾರಕ್ಕೆ ಬಂದ ನೀವು ಈಗಲೂ ಕೂಡ ಆದನ್ನೇ ಹೇಳಿ ಚುನಾವಣೆಗೆ ಹೋಗುತ್ತಿದ್ದೀರಿ ಎಂದು ಆರೋಪಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv