– ಕಳೆದ 10 ವರ್ಷದಿಂದ ಕಾಡಿನಲ್ಲೇ ಬದುಕು
ಧಾರವಾಡ: ನಿಮಗೆಲ್ಲಾ ಟಾರ್ಜನ್ ಕಥೆ ಗೊತ್ತಿರಬೇಕು. ಆತ ಅರಣ್ಯದಲ್ಲೇ ತನ್ನ ಜೀವನ ಕಳೆದಿದ್ದ. ಪ್ರಾಣಿಗಳಂತೆಯೇ ಜೀವನ ಸಾಗಿಸ್ತಿದ್ದ. ಅರಣ್ಯ ಸಿಕ್ಕ ಹಣ್ಣುಹಂಪಲನ್ನೇ ತಿಂದು ಜೀವನ ನಡೆಸ್ತಿದ್ದ. ಇಂತದ್ದೇ ಒಬ್ಬ ಆಧುನಿಕ ಯುಗದ ಟಾರ್ಜನ್ (Tarzan) ಸವದತ್ತಿಯಲ್ಲಿದ್ದಾನೆ. ಈತ ಕಳೆದ 10 ವರ್ಷಗಳಿಂದ ಊಟನೇ ಮಾಡಿಲ್ಲ. ಬದಲಾಗಿ ಕಾಡಿನಲ್ಲಿ ಸಿಗುವ ಸೊಪ್ಪುಸೆದೆಯನ್ನೇ ತಿನ್ನುತ್ತಾ ಬದುಕುತ್ತಿದ್ದಾನೆ.
ಬೆಳಗಾವಿ (Belagavi) ಜಿಲ್ಲೆಯ ಸವದತ್ತಿಯ (Savadatti) ಗುಡ್ಡಗಾಡು ಪ್ರದೇಶದಲ್ಲಿ ಬುಡನ್‌ಖಾನ್ (34) ಎಂಬ ವ್ಯಕ್ತಿ ಕಳೆದ 10 ವರ್ಷಗಳಿಂದ ಕಾಡಿನಲ್ಲೇ ವಾಸವಿದ್ದಾನೆ. ಮೊದಲು ಸಾಮಾನ್ಯ ಜನರಂತೆ ಇದ್ದ ಈತ, 10 ವರ್ಷದ ಹಿಂದೆ ತನ್ನ ಊರುಗೋಳ ಗ್ರಾಮ ಬಿಟ್ಟು ಅರಣ್ಯ ಸೇರಿದ್ದಾನೆ.
ಈ ಬುಡನ್‌ಖಾನ್‌ನನ್ನು (BudanKhan) ಆಧುನಿಕ ಯುಗದ ಟಾರ್ಜನ್ ಅಂತಾನೂ ಕರೆಯಬಹುದು. ಯಾಕಂದ್ರೆ ಈತ ಊಟ ಮಾಡೊದನ್ನ ಬಿಟ್ಟು 10 ವರ್ಷ ಆಯ್ತು. ಮಂಗನಿಂದ ಮಾನವ ಅಂತಾರಲ್ಲ ಸದ್ಯ ಹಾಗೆಯೇ ಈತ ವಾಸವಿದ್ದಾನೆ. ಬೆಳಗ್ಗೆ ಎದ್ದರೆ ಸೊಪ್ಪು ತಿಂತಾನೆ. ಈತನಿಗೆ ಮಧ್ಯಾಹ್ನ, ರಾತ್ರಿಯ ಊಟವೂ ಇದೆ. ಮಜಾ ಅಂದರೆ ಈತ ಮಂಗಗಳನ್ನ ನೋಡಿ ಸೊಪ್ಪನ್ನು ತಿನ್ನೊದನ್ನ ಕಲಿತಿದ್ದಾನಂತೆ. ಇನ್ನು ಜನರ ನಡುವೆ ಇದ್ದರೆ ನಿದ್ದೆನೇ ಬರಲ್ಲ ಅಂತೆ. ಹೀಗಾಗಿ ಗುಡ್ಡಗಾಡು ಪ್ರದೇಶದಲ್ಲೇ ಮನೆ ಮಾಡಿಕೊಂಡು ಒಬ್ಬಂಟಿ ಜೀವನ ನಡೆಸುತಿದ್ದಾನೆ.
ಇನ್ನು, 80 ನಮೂನೆಯ ಸೊಪ್ಪನ್ನು ತಿನ್ನುವ ಈತನಿಗೆ ರೋಗವೇ ಇಲ್ಲ. ಜನರಿಗೆ ಜ್ವರಾನೋ ಅಥವಾ ಏನಾದರು ನೋವು ಇದ್ದೇ ಇರುತ್ತವೆ. ಆದರೆ ಈ ಟಾರ್ಜನ್ ಮ್ಯಾನ್‌ಗೆ ಅದೇನೂ ಇಲ್ಲ. ಈತ ಪ್ಯಾಂಟ್ ಬಿಟ್ಟರೇ ಬೇರೆ ಏನೂ ಹಾಕಲ್ಲ. ಗುಡ್ಡದ ಬಂಡೆಗಳ ಮೇಲೆ ಓಡಾಡುತ್ತ ಜೀವನ ನಡೆಸುತ್ತಿರುವ ಈ ಬುಡನ್‌ಖಾನ್‌ಗೆ ಮದುವೆ ವಿಷಯ ತೆಗೆದರೆ ಸಾಕು, ಅವರ ಜೊತೆ ಮಾತಾಡೊದನ್ನೇ ಬಿಡ್ತಾನಂತೆ. ಇವರ ಸಹೋದರರು ಸಾಕಷ್ಟು ಬಾರಿ ಇವನನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನ ಮಾಡಿದ್ದಾರೆ. ಆದರೆ ಅದು ಯಾವುದೇ ಫಲ ಕೊಟ್ಟಿಲ್ಲ.
ಒಟ್ಟಾರೆ ಹೇಳುವುದಾದರೆ ಹೊಟ್ಟೆ ಇದ್ದರೆ, ಅದಕ್ಕಾಗಿ ಬಡದಾಡಬೇಕು. ಆದರೆ ಪ್ರಾಣಿಯಂತೆ ಸೊಪ್ಪು ತಿಂದು ಬದುಕುವವನಿಗೆ ಯಾವ ಚಿಂತೆ ಎನ್ನುವಂತೆ ಇದೆ ಈತನ ಕಥೆ. ಏನೇ ಇರಲಿ, ಈ ಆಧುನಿಕ ಯುಗದ ಟಾರ್ಜನ್‌ನನ್ನು ನೋಡೋದೇ ಒಂದು ಮಜಾ.