– ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ತೀರ್ಥಯಾತ್ರೆ
ಕಾರವಾರ: ರಾಮಾಯಣ ಕಾಲದಲ್ಲಿ ಪುತ್ರ ಭಕ್ತಿಗೆ ಹೆಸರಾದವನು ಶ್ರವಣ ಕುಮಾರ. ಇದೀಗ ಮೈಸೂರಿನ ಈ ಕೃಷ್ಣಕುಮಾರ್ ತನ್ನ ತಾಯಿಯನ್ನು ಭಾರತದಾದ್ಯಂತ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಿ, ವಿದೇಶಗಳನ್ನೂ ತೋರಿಸಿ ಇದೀಗ ದಕ್ಷಿಣ ಕಾಶಿ ಎಂದು ಪ್ರಸಿದ್ಧವಾದ ಗೋಕರ್ಣದ ಕಡೆ ಹೊರಟಿದ್ದಾರೆ. ಈ ಮೂಲಕ ಆಧುನಿಕ ಶ್ರವಣ ಕುಮಾರ (Shravan Kumar) ಎನಿಸಿಕೊಂಡಿದ್ದಾರೆ.
ಹೌದು ಮೈಸೂರಿನ (Mysuru) ಕೃಷ್ಣಕುಮಾರ್ ತಮ್ಮ ಹಳೆಯ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ (Scooter) ವಯೋವೃದ್ಧ ತಾಯಿ ಚೂಡಾಲಮ್ಮ (73) ಅವರನ್ನು ಕರೆದುಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸಿದ್ದಾರೆ. ಮಾತ್ರವಲ್ಲದೆ 4 ದೇಶಗಳನ್ನು ಕೂಡ ತೋರಿಸಿಕೊಂಡು ಬಂದಿದ್ದಾರೆ. ಇದೀಗ ಬೆಳಗಾವಿ ಮೂಲಕ ಗೋವಾಗೆ ಆಗಮಿಸಿ ನಂತರ ಅಲ್ಲಿಂದ ಕಾರವಾರ, ಗೋಕರ್ಣ ಮಾರ್ಗವಾಗಿ ಸಾಗುತ್ತಿದ್ದಾರೆ.
ಭೂತಾನ್, ಮೈನ್ಮಾರ್, ನೇಪಾಳ ಮಾತ್ರವಲ್ಲದೆ ಭಾರತದ ಕನ್ಯಾಕುಮಾರಿಯಿಂದ ಹಿಡಿದು ಕಾಶ್ಮೀರದವರೆಗೂ ಇದೇ ಹಳೆ ಸ್ಕೂಟರ್‌ನಲ್ಲಿ ಕೃಷ್ಣಕುಮಾರ್ ತಮ್ಮ ವೃದ್ಧ ತಾಯಿಯನ್ನು ಕೂರಿಸಿಕೊಂಡು ಎಲ್ಲ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಬ್ರಹ್ಮಚಾರಿಯಾಗಿಯೇ ಉಳಿದುಕೊಂಡು ಕೃಷ್ಣಕುಮಾರ್ ತಮ್ಮ ತಾಯಿಗೆ ದೇಶವನ್ನು ಸುತ್ತಿಸುವ ಸಂಕಲ್ಪ ಮಾಡಿದ್ದರು.
ಬಜಾಜ್ ಚೇತಕ್ ಸ್ಕೂಟರ್ ಅನ್ನು ಕೃಷ್ಣಕುಮಾರ್ ಅವರಿಗೆ ತಮ್ಮ ತಂದೆ ಕೊಡಿಸಿದ್ದರು. ಈ ಸ್ಕೂಟರ್ ಅನ್ನು ತಮ್ಮ ತಂದೆ ಎಂದು ಭಾವಿಸಿಕೊಂಡು ಅದರಲ್ಲಿಯೇ ತಾಯಿಯನ್ನು ತೀರ್ಥಯಾತ್ರೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಸ್ಕೂಟರ್‌ನಲ್ಲಿಯೇ ತಾಯಿಯನ್ನು ಕೂರಿಸಿಕೊಂಡು ದೇಶದ ಎಲ್ಲ ಕ್ಷೇತ್ರಗಳ ದರ್ಶನ ಮಾಡಿಸುತ್ತಿದ್ದಾರೆ. ಇದನ್ನೂ ಓದಿ: ನಟ ಜಗ್ಗೇಶ್ ಪತ್ನಿ ಪೂಜೆ ಮಾಡಿ ಇಟ್ಟಿದ್ದ ಪೆಂಡೆಂಟ್ ಕೊಟ್ಟಿದ್ದಾರೆ: ಅಧಿಕಾರಿಗಳು
ಈ ಕುರಿತು ಮಾತನಾಡಿದ ಅವರು, ಇದು ಮಾತೃ ಸೇವಾ ಸಂಕಲ್ಪ ಯಾತ್ರೆ. ನಮ್ಮ ಮನೆಯಲ್ಲಿ 10 ಜನ ಇದ್ದರು. ನಮ್ಮ ತಾಯಿ ಇಷ್ಟು ವರ್ಷಗಳು ಕುಟುಂಬ ಸಲಹುವುದರಲ್ಲೇ ಕಾಲ ಕಳೆದರು. ಹೀಗಾಗಿ ಅವರು ಮನೆಯಿಂದ ಎಲ್ಲಿಯೂ ಹೊರಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಎಲ್ಲರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು. 2015 ರಲ್ಲಿ ನಮ್ಮ ತಂದೆಯವರು ವಿಧಿವಶರಾದರು. ನಂತರ ನಾನು ಕಾರ್ಪೊರೇಟ್ ಟೀಂ ಲೀಡರ್ ನೌಕರಿಗೆ ರಾಜೀನಾಮೆ ನೀಡಿ 2018ರ ಜನವರಿ 16 ರಿಂದ ಮೈಸೂರಿನಿಂದ ಯಾತ್ರೆ ಆರಂಭಿಸಿದ್ದೇನೆ. ಇದುವರೆಗೂ ಸ್ಕೂಟರ್‌ನಲ್ಲಿಯೇ 78,162 ಕಿ.ಮೀ ಸುತ್ತಿ ತಾಯಿಯನ್ನು ಕರೆದುಕೊಂಡು ಇಡೀ ಭಾರತ ದರ್ಶನ ಮಾಡಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸೌರಾಷ್ಟ್ರದಿಂದ ಪರಶುರಾಮ ಕುಂಡದವರೆಗೆ ಹಾಗೂ ಇತರ 3 ದೇಶಗಳನ್ನು ಕೂಡ ಇದೇ ಸ್ಕೂಟರ್‌ನಲ್ಲಿ ಸುತ್ತಿ ಬಂದಿದ್ದೇವೆ. ಇದೀಗ ಗೋವಾಕ್ಕೆ ಬಂದು ತಲುಪಿದ್ದೇವೆ. ಗೋವಾದಲ್ಲಿ ಎಲ್ಲ ದೇವಸ್ಥಾನ ಹಾಗೂ ಪ್ರವಾಸಿ ತಾಣಗಳನ್ನು ತಾಯಿಗೆ ದರ್ಶನ ಮಾಡಿಸಿಕೊಂಡು ನಂತರ ಕರ್ನಾಟಕದ ಅಂಕೋಲಾ, ಗೋಕರ್ಣ, ಉಡುಪಿ, ಮಂಗಳೂರು ಮಾರ್ಗವಾಗಿ ಎಲ್ಲ ತೀರ್ಥ ಕ್ಷೇತ್ರಗಳಿಗೆ ಭೇಟಿ ನೀಡಿ ಬಳಿಕ ಮೈಸೂರಿಗೆ ತೆರಳುವ ಸಂಕಲ್ಪ ಮಾಡಿಕೊಂಡಿದ್ದೇವೆ ಎಂದಿದ್ದಾರೆ.
ಒಟ್ಟಿನಲ್ಲಿ ತಂದೆ-ತಾಯಿಯನ್ನು ಬೀದಿಯಲ್ಲಿ ಅನಾಥ ಮಾಡುವ ಮಕ್ಕಳೇ ಹೆಚ್ಚಿರುವಾಗ ರಾಮಾಯಣ ಕಾಲದ ಶ್ರವಣ ಕುಮಾರನಂತೆ ಈ ಆಧುನಿಕ ಶ್ರವಣ ಕುಮಾರ ತಾಯಿಯನ್ನು ಬೈಕ್‌ನಲ್ಲಿ ಕರೆದೊಯ್ದು ತೀರ್ಥ ಕ್ಷೇತ್ರ ದರ್ಶನ ಮಾಡಿಸುತ್ತಿರುವುದು ನಿಜವಾಗಿಯೂ ಶ್ಲಾಘನೀಯ. ಇದನ್ನೂ ಓದಿ: ಅಪರಾಧಗಳಲ್ಲಿ ಯಾರೇ ಭಾಗಿಯಾದರೂ ಕಾನೂನು ಕ್ರಮ: ಹುಲಿ ಉಗುರು ವಿವಾದ ಬಗ್ಗೆ ಈಶ್ವರ್ ಖಂಡ್ರೆ ಮಾತು
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]