ಮಂಡ್ಯ: ಪರಿಸರ ಪ್ರೇಮಿ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದ ಆಧುನಿಕ ಭಗೀರಥ ಖ್ಯಾತಿಯ (Modern Bhagirath) ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸದೊಡ್ಡಿಯ ಕೆರೆ ಕಾಮೇಗೌಡ (84) (Kamegowda) ಇಂದು ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ನೀಲಿ ವೆಂಕಟಗೌಡ, ರಾಜಮ್ಮ ದಂಪತಿಯ ಮಗ ಕಾಮೇಗೌಡರು ಶಾಲೆಯ ಮೆಟ್ಟಿಲು ಏರಿದವರಲ್ಲ. ಆದರೆ ತಮಗಿದ್ದ ಪರಿಸರ ಕಾಳಜಿಯಿಂದ ಅನೇಕರ ಮೆಚ್ಚುಗೆಗೆ ಪಾತ್ರರಾಗಿದ್ದರು.
Advertisement
Advertisement
ಮಳವಳ್ಳಿ ತಾಲೂಕಿನ ಕುಂದೂರು ಬೆಟ್ಟದಲ್ಲಿ ಅಂತರ್ಜಲ ಹೆಚ್ಚಳಕ್ಕೆ ಹಾಗೂ ಪ್ರಾಣಿ ಪಕ್ಷಿಗಳಿಗೆ ಉಪಯೋಗವಾಗಲಿ ಎಂದು ಕಾಮೇಗೌಡ ಅವರು ಸ್ವತಃ ತಮ್ಮ ಕೈಯಲ್ಲಿ 16 ಕೆರೆಗಳನ್ನು ನಿರ್ಮಾಣ ಮಾಡಿದ್ದರು. ಜೊತೆಗೆ ಸಾವಿರಾರು ಗಿಡಗಳನ್ನು ನೆಟ್ಟು ಬೆಟ್ಟದಲ್ಲಿ ಹಸಿರು ಕ್ರಾಂತಿ ಮಾಡುವ ಮೂಲಕ ಪರಿಸರ ಕಾಳಜಿಯನ್ನು ಕಾಮೇಗೌಡರು ಮೆರೆದಿದ್ದರು. ಇದನ್ನೂ ಓದಿ: ಪರೇಶ್ ಮೇಸ್ತಾ ಕೇಸ್ ರೀ ಓಪನ್‍ಗೆ ಒತ್ತಡ – ಸರ್ಕಾರ ಸೈಲೆಂಟ್
Advertisement
Advertisement
ಇವರ ಈ ಕಾರ್ಯವನ್ನು ಮೆಚ್ಚಿ ಪ್ರಧಾನ ಮಂತ್ರಿ ಅವರ ಜನಪ್ರಿಯ ಕಾರ್ಯಕ್ರಮವಾದ ಮನ್ ಕೀ ಬಾತ್ ಕಾರ್ಯಕ್ರಮಕ್ಕೆ ಕಾಮೇಗೌಡರನ್ನು ಆಹ್ವಾನ ಮಾಡಲಾಗಿತ್ತು. ಆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಮೇಗೌಡರ ಕಾರ್ಯವನ್ನು ಶ್ಲಾಘನೆ ಮಾಡಿ ಹೊಗಳಿದ್ದರು. ಕಾಮೇಗೌಡರ ಕೆಲಸವನ್ನು ಗುರುತಿಸಿ ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಲಾಗಿದೆ.
ಕಳೆದ ರಾತ್ರಿ ಕಾಮೇಗೌಡ ಅವರಿಗೆ ತೀವ್ರವಾದ ಹೊಟ್ಟೆ ನೋವು ಕಾಣಿಸಿಕೊಂಡಿದ್ದು, ಇದಾದ ನಂತರ ವಾಂತಿಯನ್ನು ಮಾಡಿಕೊಂಡಿದ್ದಾರೆ. ಬಳಿಕ ಮನೆಯಲ್ಲಿ ಕಾಮೇಗೌಡರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ರಿಷಿ ಸುನಾಕ್‌ಗೆ ಸಿಗುತ್ತಾ ಬ್ರಿಟನ್ ಪ್ರಧಾನಿ ಹುದ್ದೆ?
ಕೆರೆ ನಿರ್ಮಾಣಕ್ಕೆ ಕೈ ಹಾಕಿದ್ಯಾಕೆ ಕಾಮೇಗೌಡರು?
ಕುರಿಗಾಹಿಯಾಗಿದ್ದ ಕಾಮೇಗೌಡರು ಸುಮಾರು 15 ವರ್ಷಗಳ ಹಿಂದೆ ಕುಂದೂರು ಬೆಟ್ಟಕ್ಕೆ ಕುರಿ ಮೇಯಿಸಲು ಹೋಗಿದ್ದರು. ಆಗ ವಿಪರೀತ ದಾಹವಾಗಿ ನೀರಿಗಾಗಿ ಪರದಾಡಿದ್ದರು. ಬಳಿಕ ಸ್ವಲ್ಪ ದೂರದ ಮನೆಗೆ ಹೋಗಿ ನೀರು ಕೇಳಿ ಪಡೆದಿದ್ದರು. ಆಗ ನಾನು ದಾಹ ತೀರಿಸಿಕೊಂಡೆ ಆದರೆ ಪ್ರಾಣಿಗಳ ಪರಿಸ್ಥಿತಿ ಏನು ಎನ್ನುವ ಚಿಂತೆ ಅವರಿಗೆ ಕಾಡಿತ್ತು. ಹೀಗಾಗಿ ಗುಡ್ಡದಲ್ಲಿ ಕೆರೆ ನಿರ್ಮಾಣಕ್ಕೆ ಮುಂದಾದರು.
ಕಾಮೇಗೌಡರು ಗುಡ್ಡದಲ್ಲಿ ಕೆರೆ ತೋಡುತ್ತಿದ್ದನ್ನು ಕಂಡು ಆರಂಭದಲ್ಲಿ ಅನೇಕರು ಗೇಲಿ ಮಾಡಿದ್ದರು. ಇವನಿಗೆ ಹುಚ್ಚು ಹಿಡಿದಿದೆ, ಅದಕ್ಕೆ ಇಲ್ಲಿ ಕೆರೆ ತೋಡುತ್ತಿದ್ದಾನೆ ಎಂದು ಮಾತನಾಡಿದ್ದರು. ಆದರೆ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದ ಕಾಮೇಗೌಡರು, ತಮ್ಮ ಕೆಲಸವನ್ನು ಮುಂದುವರಿಸಿದ್ದರು. ಬಳಿಕ 16 ಕೆರೆಗಳನ್ನು ನಿರ್ಮಿಸಿ ಪ್ರಧಾನಿ ಮೋದಿ, ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಕಾಮೇಗೌಡರು ತೋಡಿದ ಕೆರೆಗಳಲ್ಲಿ ಕಡು ಬೇಸಿಗೆಯಲ್ಲಿ ಕೂಡ ನೀರು ತುಂಬಿರುತ್ತದೆ. ದಕ್ಷಿಣ ಕರ್ನಾಟಕದ ಇತರ ಭಾಗಗಳಲ್ಲಿ ನೀರು ಕಡಿಮೆಯಾದರೂ ಇವರು ತೋಡಿದ ಕೆರೆಗಳಲ್ಲಿ ನೀರು ತುಂಬಿರುತ್ತಿತ್ತು. ತಮ್ಮ ಕುರಿಗಳನ್ನು ಮತ್ತು ಜಾನುವಾರುಗಳನ್ನು ಮೇಯಿಸುವಾಗ ಪರ್ವತ ಪ್ರದೇಶದ ಕಣಿವೆಗಳಲ್ಲಿ ನೀರು ಸಿಗದೇ ಪರಿತಪಿಸುತ್ತಿರುವ ಪ್ರಾಣಿ-ಪಕ್ಷಿಗಳನ್ನು ಕಂಡು ಕೆರೆಗಳನ್ನು ಅಗೆಯುವ ಆಲೋಚನೆ ಹೊಳೆಯಿತು ಎಂದು ಕಾಮೇಗೌಡರು ಈ ಹಿಂದೆ ಹೇಳಿದ್ದರು.