ತಿರುವನಂತಪುರಂ: ನಟಿ ಮತ್ತು ರೂಪದರ್ಶಿ ಶಹಾನಾ ಮೃತದೇಹ ಪತ್ತೆಯಾಗಿದ್ದು, ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಸಂಬಂಧಿಕರು ಆರೋಪಿಸುತ್ತಿದ್ದಾರೆ. ಈ ಹಿನ್ನೆಲೆ ಶಹಾನಾ ಪತಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
‘ಲಾಕ್ ಡೌನ್’ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದ ಶಹಾನಾ(20) ಕಾಸರಗೋಡು ಮೂಲದವರು. ಶಹಾನಾ ಪರಂಬಿಲ್ ಬಜಾರ್‌ನಲ್ಲಿರುವ ತಮ್ಮ ನಿವಾಸದ ಕಿಟಕಿ ಗ್ರಿಲ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಹಿನ್ನೆಲೆ ಶಹಾನಾ ಪತಿ ಸಾಜದ್ ಅವರನ್ನು ವಿಚಾರಣೆ ಮಾಡುವುದಕ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಹಾನಾ ನಿವಾಸವು ಕೋಝಿಕ್ಕೋಡ್ ನಗರದಿಂದ ಸುಮಾರು 14 ಕಿಮೀ ದೂರದಲ್ಲಿದೆ. ಇದನ್ನೂ ಓದಿ: ನೋಡ ನೋಡುತ್ತಿದ್ದಂತೆ ವೇದಿಕೆ ಮೇಲೆ ಉರುಳಿದ ಲೈಟಿಂಗ್ ಟ್ರೇಸ್: ಈರಣ್ಣ ಕಡಾಡಿ ಪಾರು
ಶುಕ್ರವಾರ ಬೆಳಗಿನ ಜಾವ 1 ಗಂಟೆಗೆ ನೆರೆಹೊರೆಯವರಿಂದ ಶಹಾನಾ ಸಾವಿನ ಸುದ್ದಿ ತಿಳಿದುಬಂದಿದೆ. ಈ ಹಿನ್ನೆಲೆ ನೆರೆಮನೆಯವರೆ ಕಾಸರಗೋಡಿನ ಆಕೆಯ ಸಂಬಂಧಿಕರಿಗೂ ಮಾಹಿತಿ ತಿಳಿಸಿದ್ದಾರೆ. ಶಹಾನಾ ಮೃತದೇಹವನ್ನು ನೋಡಿದ ಸಂಬಂಧಿಕರು ಇದು ಕೊಲೆ ಎಂದು ಶಂಕಿಸಿದ್ದಾರೆ.
ಈ ಕುರಿತು ಶಹಾನಾ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಆಕೆಯ ಸಾವು ನಿಗೂಢವಾಗಿದೆ. ಶಹಾನಾಳನ್ನು ಆಕೆಯ ಪತಿ ಸಾಜದ್ ಹಣಕ್ಕಾಗಿ ಹಲ್ಲೆ ಮಾಡುತ್ತಿದ್ದ. ಇದರ ಬಗ್ಗೆ ಶಹಾನಾ ಯಾವಾಗಲೂ ಹೇಳಿಕೊಳ್ಳುತ್ತಿದ್ದಳು. ಅವಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಶಹಾನಾ ತನ್ನ 20ನೇ ವರ್ಷದ ಹುಟ್ಟುಹಬ್ಬದ ಸಂತೋಷಕೂಟಕ್ಕೆ ನಮ್ಮೆಲ್ಲರನ್ನು ಆಹ್ವಾನಿಸಿದ್ದಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮತದಾನದ ದಿನ ಬೂತ್ ಮುಖ್ಯದ್ವಾರದಲ್ಲಿ ಮದ್ಯ ಪರೀಕ್ಷೆ ಯಂತ್ರವನ್ನು ಅಳವಡಿಸಿ: ಇಸಿಗೆ ಪತ್ರ
ಶಹಾನಾ ಸಾವಿನ ತನಿಖೆಯು ಕಂದಾಯ ವಿಭಾಗೀಯ ಅಧಿಕಾರಿ ಉಪಸ್ಥಿತಿಯಲ್ಲಿ ನಡೆಯಲಿದೆ.
ಕನ್ನಡದಲ್ಲಿ ಶಹಾನಾ ‘ಲಾಕ್ ಡೌನ್’ ಹೆಸರಿನಲ್ಲಿ ಸಿನಿಮಾ ಮಾಡಿದ್ದು, ಅದಿನ್ನೂ ರಿಲೀಸ್ ಆಗಬೇಕಿದೆ. ಅಲ್ಲದೇ, ಮಲಯಾಳಂನಲ್ಲೂ ಅವರು ಒಂದಷ್ಟು ಚಿತ್ರಗಳನ್ನು ಮಾಡಿದ್ದಾರೆ. ಕೇವಲ ಇಪ್ಪತ್ತೇ ವರ್ಷದಲ್ಲಿ ಇಹಲೋಕ ತ್ಯಜಿಸಿದ್ದಾರೆ.