ಬೆಂಗಳೂರು: ಫೋಟೋಶೂಟ್ ಮಾಡುವ ನೆಪದಲ್ಲಿ ಫೋಟೋಗ್ರಾಫರ್ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್‍ನಲ್ಲಿ ನಡೆದಿದೆ.
ಶರತ್ ಕುಮಾರ್ ಬಂಧಿತ ಆರೋಪಿ. ಶರತ್ ಕುಮಾರ್ ಶಂಕರನಗರ ಮುಖ್ಯರಸ್ತೆಯಲ್ಲಿ ಇರುವ ಗೋಲ್ಡನ್ ಲೈಟ್ ಕ್ರಿಯೇಶನ್ ಸ್ಟುಡಿಯೋದಲ್ಲಿ ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದನು. ಸ್ಟುಡಿಯೋದಲ್ಲಿ ಫೋಟೋಶೂಟ್ ಮಾಡುವಾಗ ಮಾಡೆಲ್ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಶರತ್ ಇನ್‍ಸ್ಟಾಗ್ರಾಂ ಮೂಲಕ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದನು. ಅಲ್ಲದೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿಯನ್ನು ತನ್ನ ಸ್ಟುಡಿಯೋಗೆ ಕರೆಸಿಕೊಂಡಿದ್ದನು. ಶರತ್ ಮಾತು ಕೇಳಿ ಯುವತಿ ಸ್ಟುಡಿಯೋಗೆ ಹೋಗಿದ್ದಳು.
ಯುವತಿ ಸ್ಟುಡಿಯೋಗೆ ಬರುತ್ತಿದ್ದಂತೆ ಶರತ್ ಸ್ಟುಡಿಯೋದಲ್ಲಿ ಇದ್ದವರನ್ನು ಹೊರಗೆ ಕಳುಹಿಸಿದ್ದಾನೆ. ಅವರು ಹೊರಗೆ ಹೋಗುತ್ತಿದ್ದಂತೆ ಫೋಟೋಶೂಟ್ ಮಾಡುವ ನೆಪದಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ.
ಸದ್ಯ ಯುವತಿ ಶರತ್ ಕುಮಾರ್ ವಿರುದ್ಧ ಲೈಂಗಿಕ ಕಿರುಕುಳ ಯತ್ನ ಪ್ರಕರಣ ದಾಖಲಿಸಿದ್ದಾಳೆ. ಯುವತಿಯ ದೂರು ದಾಖಲಿಸಿಕೊಂಡ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು ಆರೋಪಿ ಶರತ್ ಕುಮಾರ್‍ನನ್ನು ಬಂಧಿಸಿದ್ದಾರೆ.