ಮಗುವಿಗೆ ಸ್ತನಪಾನ ಮಾಡಿಸುತ್ತಲೇ ರ‍್ಯಾಂಪ್ ಮೇಲೆ ರೂಪದರ್ಶಿ ಕ್ಯಾಟ್‍ವಾಕ್: ವಿಡಿಯೋ ನೋಡಿ

Public TV
1 Min Read
Model Photo

ವಾಷಿಂಗ್ಟನ್: ಅಮೆರಿಕಾದ ರೂಪದರ್ಶಿಯೊಬ್ಬರು ಮಗುವಿಗೆ ಸ್ತನಪಾನ ಮಾಡಿಸುತ್ತ, ರ‍್ಯಾಂಪ್ ಮೇಲೆ ಕ್ಯಾಟ್‍ವಾಕ್ ಮಾಡುವ ಮೂಲಕ ಭಾರೀ ಚರ್ಚೆಗೆ ಕಾರಣವಾಗಿದ್ದಾರೆ.

ಮಾರಾ ಮಾರ್ಟಿನ್ ಕ್ಯಾಟ್‍ವಾಕ್ ಮಾಡುತ್ತಲೇ ತನ್ನ ಮಗಳಿಗೆ ಸ್ತನಪಾನ ಮಾಡಿಸಿದ ಸ್ವಿಮ್ ಸೂಟ್ ಮಾಡೆಲ್. ಇತ್ತೀಚೆಗೆ ಮಿಯಾಮಿ ಸ್ವಿಮ್ ವೀಕ್ ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಮಾರಾ ಮಾರ್ಟಿನ್ ತನ್ನ ಐದು ತಿಂಗಳ ಮಗಳಿಗೆ ಸ್ತನಪಾನ ಮಾಡುತ್ತಲೇ ಹೆಜ್ಜೆ ಹಾಕಿ ಭಾರೀ ಸದ್ದು ಮಾಡಿದ್ದರು.

ಮಾರಾ ಮಾರ್ಟಿನ್ ಮಗುವಿಗೆ ಸ್ತನಪಾನ ಮಾಡಿಸುತ್ತ ಹೆಜ್ಜೆ ಹಾಕುವಾಗ, ಅಲ್ಲಿನ ಶಬ್ಧದಿಂದ ಮಗಳು ಗಾಬರಿಯಾಗದಿರಲಿ ಅಂತಾ ಮಗುವಿನ ಕಿವಿಗೆ ಹೆಡ್‍ಫೋನ್ ಹಾಕಿದ್ದರು. ಮಾರಾ ಮಾರ್ಟಿನ್ ಪುಳಕ ನೀಡುವ ಕ್ಯಾಟ್‍ವಾಕ್ ಹಾಗೂ ಆಕೆ ಮಗುವಿಗೆ ಸ್ತನಪಾನ ಮಾಡಿಸುತ್ತಲೇ ಧೈರ್ಯದಿಂದ ರ್ಯಾಂಪ್‍ವಾಕ್ ಮಾಡಿದ್ದನ್ನು ಕಂಡು ಪ್ರೇಕ್ಷಕರು ಬೆರಗಾಗಿದ್ದರು.

ನಾನು ನಿತ್ಯವೂ ಹೀಗೆ ನನ್ನ ಮಗುವಿಗೆ ನಡೆದಾಡುತ್ತಲೇ ಸ್ತನಪಾನ ಮಾಡಿಸುತ್ತೇನೆ. ಮಹಿಳೆ ಹೀಗೂ ಮಾಡುತ್ತ ಮಗುವಿಗೆ ಸ್ತನಪಾನ ಮಾಡಿಸಬಹುದು ಎನ್ನುವುದನ್ನು ಮಹಿಳೆಯರಿಗೆ ಹೇಳಿಕೊಡಲು ಹೀಗೆ ಮಾಡಿದ್ದಾಗಿ ಮಾರಾ ಹೇಳಿಕೊಂಡಿದ್ದಾರೆ.

ರ‍್ಯಾಂಪ್ ವಾಕ್ ಕಾರ್ಯಕ್ರಮದಲ್ಲಿ ಇನ್ನೇನು ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ ಮಗಳು ಹಸಿವಿನಿಂದ ಅಳಲಾರಂಭಿಸಿದಳು. ಆಗ ಅಲ್ಲಿದ್ದವರು ಮಗುವಿನೊಂದಿಗೆ ಕ್ಯಾಟ್‍ವಾಕ್ ಮಾಡಲು ಸಲಹೆ ನೀಡಿದ್ದರು ಎಂದು ಮಾರಾ ಹೇಳುವ ಮೂಲಕ ನಿಜವಾದ ಕಾರಣವನ್ನು ತೆರೆದಿಟ್ಟಿದ್ದಾರೆ.

ಮಗುವಿಗೆ ಹಾಲುಣಿಸುತ್ತಾ ಕ್ಯಾಟ್‍ವಾಕ್ ಮಾಡಲು ಅವಕಾಶ ನೀಡಿದ ನಿಮಗೆ ಧನ್ಯವಾದಗಳು, ನಿಮ್ಮಂಥವರಿಂದಾಗಿ ನನ್ನ ಮಗಳು ಒಂದು ಉತ್ತಮ ಪ್ರಪಂಚದಲ್ಲಿ ಬೆಳೆಯುತ್ತಾಳೆ ಎಂದು ಮಾರಾ ಮಾರ್ಟಿನ್ ಸಾಮಾಜಿಕ ತಾಣದಲ್ಲಿ ಕಾರ್ಯಕ್ರಮ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

https://www.instagram.com/p/BlVtY2Xhyj3/?utm_source=ig_embed

Share This Article
Leave a Comment

Leave a Reply

Your email address will not be published. Required fields are marked *