– ಬೇಸಿಗೆಯಲ್ಲಿ ಮಕ್ಕಳು ಆರಾಮಾಗಿರಲು ಫ್ಯಾನ್ ಖರೀದಿ
– ಉಳಿದ ಹಣವನ್ನ ಪತ್ನಿಗೆ ಕೊಟ್ಟು ನೇಣಿಗೆ ಶರಣು
ಚಂಡೀಗಢ: ಲಾಕ್‍ಡೌನ್‍ನಿಂದ ಅನೇಕ ಬಡ ಕುಟುಂಬಗಳು ಆಹಾರವಿಲ್ಲದೆ ಪರದಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟ ಕೊಡಿಸಲು ಸಾಧ್ಯವಾಗದೆ ನೊಂದ 30 ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹರಿಯಾಣದ ಗುರುಗ್ರಾಮ್‍ನಲ್ಲಿ ನಡೆದಿದೆ.
ಸರಸ್ವತಿ ಕುಂಜ್ ಪ್ರದೇಶದ ಕೊಳೆಗೇರಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮುಖೇಶ್ ಆತ್ಮಹತ್ಯೆ ಮಾಡಿಕೊಂಡು ವ್ಯಕ್ತಿ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತನ್ನ ಮೊಬೈಲ್ ಫೋನ್ ಅನ್ನು 2,500 ರೂ.ಗೆ ಮಾರಾಟ ಮಾಡಿದ್ದಾನೆ. ಅದರಲ್ಲಿ ಅಕ್ಕಿ, ಹಿಟ್ಟು ಮತ್ತು ಸಕ್ಕರೆ ಮತ್ತು ಟೇಬಲ್ ಫ್ಯಾನ್ ಖರೀದಿಸಿ ಪತ್ನಿಗೆ ಕೊಟ್ಟಿದ್ದಾನೆ. ಬೇಸಿಗೆಯಲ್ಲಿ ತನ್ನ ಮಕ್ಕಳು ಆರಾಮಾಗಿರಲಿ ಎಂದು ಫ್ಯಾನ್ ಖರೀದಿಸಿದ್ದಾನೆ.
Advertisement
Advertisement
ಈತನಿಗೆ ಮದ್ವೆಯಾಗಿ ನಾಲ್ವರು ಮಕ್ಕಳಿದ್ದು, ತನ್ನ ಪತ್ನಿ ಪೂನಂ ಜೊತೆ ಗುಡಿಸಲಲ್ಲಿ ವಾಸಿಸುತ್ತಿದ್ದನು. ಫೋನ್ ಮಾರಾಟ ಮಾಡಿ ಉಳಿದ ಹಣವನ್ನು ಪತ್ನಿಗೆ ನೀಡಿದ್ದಾನೆ. ನಂತರ ತಾನು ವಾಸ ಮಾಡುತ್ತಿದ್ದ ಗುಡಿಸಲಿಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
Advertisement
ಸ್ವಲ್ಪ ಸಮಯದ ನಂತರ ಪತ್ನಿ ಪೂನಂ ಗುಡಿಸಿಲಿನೊಳಗೆ ಹೋಗಿ ನೋಡಿದ್ದಾಳೆ. ಅಷ್ಟರಲ್ಲಿ ಮುಖೇಶ್ ನೇಣು ಬಿಗಿದುಕೊಂಡು ಮೃತಪಟ್ಟಿದ್ದನು. ಮೊಬೈಲ್ ಫೋನ್ ಮಾರಾಟ ಮಾಡಿ ಮುಖೇಶ್ ನೀಡಿದ್ದ ಹಣವನ್ನು ಹೊರತುಪಡಿಸಿ ಕುಟುಂಬಕ್ಕೆ ಯಾವುದೇ ಆದಾಯ ಇಲ್ಲ. ಹೀಗಾಗಿ ನೆರೆಹೊರೆಯವರು ಹಣ ಸಂಗ್ರಹ ಮಾಡಿ ಅಂತಿಮ ವಿಧಿಗಳನ್ನು ಮುಗಿಸಿದ್ದಾರೆ.
Advertisement
ಮೃತ ಮಾವ ಉಮೇಶ್ ಮುಖಿಯಾ ಮಾತನಾಡಿ, ಮುಖೇಶ್ ಪೇಂಟಿಂಗ್ ಕೆಲಸ ಮಾಡುತ್ತಿದ್ದನು. ಆದರೆ ಕಳೆದ ಎರಡು ತಿಂಗಳಿಂದ ಯಾವುದೇ ಪೇಂಟಿಂಗ್ ಕೆಲಸವಿರಲಿಲ್ಲ. ಹೀಗಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿದ್ದನು. ಕೊನೆಗೆ ಕೂಲಿ ಮಾಡುತ್ತಿದ್ದನು. ಆದರೆ ಲಾಕ್‍ಡೌನ್‍ನಿಂದ ಕೂಲಿ ಕೆಲಸವು ಸಿಗಲಿಲ್ಲ. ಆಗ ಸಾಲ ಕೂಡ ಮಾಡಿಕೊಂಡಿದ್ದ. ಇದರಿಂದ ಮುಖೇಶ್ ಖಿನ್ನತೆಗೆ ಒಳಗಾಗಿದ್ದನು ಎಂದು ಹೇಳಿದರು.
ಆತನ ಕುಟುಂಬ ಭಿಕ್ಷೆ ಬೇಡುತ್ತಿತ್ತು. ಅವರು ಯಾವುದೇ ಆದಾಯದ ಮೂಲವನ್ನು ಹೊಂದಿಲ್ಲ. ಅಲ್ಲದೇ ಆತ ಖಿನ್ನತೆಗೆ ಒಳಗಾಗಿದ್ದನು ಎಂದು ಮುಖೇಶ್ ಸಂಬಂಧಿಕರೊಬ್ಬರು ತಿಳಿಸಿರುವುದಾಗಿ ಪೊಲೀಸ್ ಕಮಿಷನರ್ ಮೊಹಮ್ಮದ್ ಅಕಿಲ್ ಹೇಳಿದ್ದಾರೆ.