ಮುಂಬೈ: ಪ್ರಧಾನಿ ನರೇಂದ್ರ ಮೋದಿ ಜೀವನಾಧರಿತ ಸಿನಿಮಾ ಬಿಡುಗಡೆಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್) ವಿರೋಧ ವ್ಯಕ್ತಪಡಿಸಿದೆ. ಏಪ್ರಿಲ್-ಮೇ ತಿಂಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಚಿತ್ರ ಬಿಡುಗಡೆಯಾದ್ರೆ ನೀತಿ ಸಂಹಿತೆಯ ಉಲ್ಲಂಘನೆ ಆಗುತ್ತದೆ ಎಂದು ಹೇಳಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಎನ್‍ಎಸ್ ನಾಯಕಿ ಶಾಲಿನಿ ಠಾಕ್ರೆ, ಬಿಜೆಪಿ ತನ್ನ ಸರ್ಕಾರದ ಯೋಜನೆಗಳನ್ನು ಪ್ರಚಾರಗೊಳಿಸಲು ಸಿನಿಮಾಗಳನ್ನು ಬಳಸಿಕೊಳ್ಳುತ್ತಿದೆ. ಈ ಮೊದಲು ‘ಟಾಯ್ಲೆಟ್-ಏಕ್ ಪ್ರೇಮ್ ಕಥಾ’ ಮತ್ತು ‘ಪ್ಯಾಡ್ ಮ್ಯಾನ್’ ಸಿನಿಮಾಗಳಿಗೆ ಸರ್ಕಾರವೇ ಪ್ರಾಯೋಜಕತ್ವ ಮಾಡಿತ್ತು. ಒಂದು ವರ್ಷದ ಅವಧಿಯಲ್ಲಿಯೇ ಮತ್ತೊಂದು ಸಿನಿಮಾವನ್ನು ತೆರೆಯ ಮೇಲೆ ಬಿಜೆಪಿ ತರುತ್ತಿದೆ. ಆದ್ರೆ ನಮ್ಮ ಪಕ್ಷ ಸಿನಿಮಾ ಬಿಡುಗಡೆಗೆ ವಿರೋಧಿಸುತ್ತದೆ ಎಂದು ಹೇಳಿದ್ದಾರೆ.
Advertisement
Advertisement
ಬಿಜೆಪಿ ನಾಯಕರು ಸಿನಿಮಾಗಳ ಮೂಲಕ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತಿದ್ದಾರೆ. ಸಿನಿಮಾ ನಿರ್ಮಾಪಕರು ಕಥೆ, ಸಂಭಾಷಣೆ ಜಾವೇದ್ ಅಖ್ತರ್ ಮತ್ತು ಸಮೀರ್ ಲೇಖನಿಯಲ್ಲಿ ಮೂಡಿ ಬಂದಿದೆ ಎಂದು ಹೇಳುತ್ತಾರೆ. ಇಬ್ಬರು ಸಾಹಿತ್ಯಗಾರರು ಮೋದಿ ಜೀವನಾಧರಿತ ಸಿನಿಮಾಗೂ ಮತ್ತು ನಮಗೂ ಸಂಬಂಧವಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೊಂಡಿದ್ದಾರೆ. ಬಿಜೆಪಿ ಈ ರೀತಿ ಪ್ರಚಾರಕ್ಕಾಗಿ ಕೆಳಮಟ್ಟದ ರಾಜಕಾರಣವನ್ನು ಬಿಡಬೇಕೆಂದು ಎಂದು ಮಹಾರಾಷ್ಟ್ರ ನವನಿರ್ಮಾಣ ಚಿತ್ರಪಥ್ ಕರ್ಮಚಾರಿ ಸೇನೆ ಅಧ್ಯಕ್ಷ ಅಮೇ ಕೋಪ್ಕರ್ ಆಗ್ರಹಿಸಿದ್ದಾರೆ.
Advertisement
ಮೋದಿ ಬಯೋಪಿಕ್ ಸಿನಿಮಾದಲ್ಲಿ ಪ್ರಧಾನಿಗಳ ಪಾತ್ರದಲ್ಲಿ ನಟ ವಿವೇಕ್ ಓಬೇರಾಯ್ ನಟಿಸಿದ್ದಾರೆ. ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಏಪ್ರಿಲ್ 12ರಂದು ಒಟ್ಟು 23 ಭಾಷೆಗಳಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಬೊಮ್ಮನ್ ಇರಾನಿ, ಮನೋಜ್ ಜೋಶಿ, ಬರ್ಖಾ ಬಿಷ್ತ, ಜರೀನಾ ವಹಾಬ್, ದರ್ಶನ್ ರಾವಲ್, ಅಕ್ಷತಾ ಆರ್.ಸಲುಜಾ, ಅಂಜನಾ ಶ್ರೀವಾತ್ಸವ, ರಾಜೇಂದ್ರ ಗುಪ್ತಾ ಮತ್ತು ಯಥೀನ್ ಸೇರಿದಂತೆ ದೊಡ್ಡ ತಾರಾಗಣವನ್ನೇ ಸಿನಿಮಾ ಒಳಗೊಂಡಿದೆ.