-ಅವ್ರ ತಲೆಯನ್ನು ನಾವ್ ಸರಿ ಮಾಡ್ತೀವಿ ಅಂದ್ರು ಸಚಿವರು
ಮಂಡ್ಯ: ಜಿಲ್ಲೆಯಲ್ಲಿ ರಾಜಕೀಯ ನಾಯಕರ ವಾಗ್ದಾಳಿ ಮುಂದುವರಿದಿದ್ದು, ಈ ಬಾರಿ ಬಹಿರಂಗ ಚರ್ಚೆಗೆ ಬರುವಂತೆ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಮಾಜಿ ಸಚಿವ ಚಲುವರಾಯಸ್ವಾಮಿ ಅವರಿಗೆ ಆಹ್ವಾನ ನೀಡಿದ್ದಾರೆ.
ಚಲುವರಾಯಸ್ವಾಮಿ ಬೆಂಬಲಿಗರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಸಚಿವರು, ಈ ನಿರ್ಧಾರಕ್ಕೆ ಮುಂದಾಗಿದ್ದಾರೆ. ತಮ್ಮ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದವನು ಸೋತ, ಸೋತವನು ಸತ್ತ ಅನ್ನುವ ರೀತಿ ನಾವೆಲ್ಲ ರಾಜಕಾರಣ ಮಾಡಬೇಕಾಗಿದೆ. ಆ ಅರ್ಥದಲ್ಲಿ ಡೆಡ್ ಹಾರ್ಸ್ ಪದ ಬಳಸಿದೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಡೆಡ್ ಹಾರ್ಸ್ ಗಳೆಲ್ಲಾ ಮಾತನಾಡೋ ಹಾಗಾಗಿದೆ- ಚಲುವರಾಯ ಸ್ವಾಮಿಯನ್ನ ಸತ್ತ ಕುದುರೆಗೆ ಹೋಲಿಸಿದ್ರು ಸಚಿವ ಪುಟ್ಟರಾಜು
ಕ್ಷೇತ್ರದ ಜನರು 52 ಸಾವಿರ ಮತಗಳ ಅಂತರದಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ನೀನು ಸುಮ್ಮನಿರಪ್ಪ ಅಂತ ಹೇಳಿದ್ದಾರೆ. ಹೀಗಾಗಿ ನಾನು ಆ ರೀತಿ ಹೇಳಿಕೆ ನೀಡಿದೆ. ಅವರಿಗೆ ಅಗೌರವ ತರುವ ಉದ್ದೇಶದಿಂದ ಹಾಗೆ ಹೇಳಿಲ್ಲ. ಚಲುವರಾಯಸ್ವಾಮಿ ಅವರನ್ನು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರನ್ನಾಗಿ ಮಾಡಿ, ರಾಜಕೀಯ ಶಕ್ತಿ ತುಂಬುತ್ತ ಬಂದವರು ಯಾರು ಎನ್ನುವುದರ ಬಗ್ಗೆ ಮಂಡ್ಯದಲ್ಲಿ ದೊಡ್ಡ ವೇದಿಕೆ ಹಾಕಿ ಬಹಿರಂಗ ಚರ್ಚೆ ಮಾಡಲು ನಾನು ಸಿದ್ಧ ಎಂದು ಕಿಡಿಕಾರಿದ್ದಾರೆ.
ನಾನು ಯಾವುದೋ ಕಾಟ್ಪೋಟಿಗಳಿಗೆ (ಲೆಕ್ಕಕ್ಕೆ ಇಲ್ಲದವರಿಗೆ) ಉತ್ತರ ಕೊಡುವ ಅಗತ್ಯ ಇಲ್ಲ ಅಂತಾ ಹೇಳಿದ ಸಚಿವರು, ಚಲುವರಾಯಸ್ವಾಮಿ ಬೆಂಬಲಿಗರ ವಿರುದ್ಧ ಕಿಡಿಕಾರಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಯಾರು ಕಾಲು ಹಿಡಿದುಕೊಂಡರು ಎನ್ನವುದಕ್ಕೆ ಮಾಜಿ ಶಾಸಕ ಎಚ್.ಬಿ.ರಾಮು ಅವರು ಸಾಕ್ಷಿ. ಬೇಕಾದರೆ ಅವರ ನೇತೃತ್ವದಲ್ಲಿಯೇ ಚರ್ಚೆ ನಡೆಯಲಿ ಅಂದ್ರು.
ನಾನು ಚಲುವರಾಯಸ್ವಾಮಿ ಸ್ನೇಹಿತರು. ರಾಜಕೀಯ ವಿಚಾರದಲ್ಲಿ ಅವರು ನನಗೆ ಏನ್ ತೊಂದರೆ ಕೊಟ್ಟರೂ, ನಾನು ಅವರ ಬಗ್ಗೆ ಏನು ಮಾತನಾಡಿರುವೆ ಎನ್ನುವ ಬಗ್ಗೆ ಚರ್ಚೆಗೆ ನಾನು ಸಿದ್ಧ. ಹೊರತಾಗಿ ಯಾವನೋ ಇನ್ನೊಬ್ಬನ ಮಾತಿಗೆ ನಾನು ಉತ್ತರ ಕೊಡುವ ಅಗತ್ಯವಿಲ್ಲ ಅಂತ ನೇರವಾಗಿ ವಾಗ್ದಾಳಿ ನಡೆಸಿದ್ರು.
ತಲೆಯಲ್ಲಿ ಮೆದುಳು ಇಟ್ಟುಕೊಂಡು ಮಾತನಾಡಬೇಕು ಎನ್ನುವ ಚಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ನನ್ನ ತಲೆಯಲ್ಲಿ ಮೆದುಳು ಇರುವುದಕ್ಕೆ ಎದುರಾಳಿಯ ಅನುಕಂಪದ ಅಲೆ ಇದ್ದರೂ ಜನ ನನ್ನನ್ನ ಗೆಲ್ಲಿಸಿದ್ದಾರೆ. ಚಲುವರಾಯಸ್ವಾಮಿ ಅವರು ತಲೆ ಸರಿ ಮಾಡಿಸಿಕೊಳ್ಳಬೇಕಾಗಿದೆ. ಅವರ ತಲೆಯನ್ನು ನಾವು ಸರಿ ಮಾಡುತ್ತೇವೆ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv