ನವದೆಹಲಿ: ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಈ ಬಾರಿ ನಾನು ಲೋಕಸಭೆ ಚುನಾವಣೆಗೆ ನಿಲ್ಲದಂತೆ ಬಿಜೆಪಿ ಸೂಚಿಸಿದೆ. ಆದರಿಂದ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ಬಿಜೆಪಿ ಹಿರಿಯ ನಾಯಕ 85 ವರ್ಷದ ಮುರಳಿ ಮನೋಹರ್ ಜೋಶಿ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಹೈಕಮಾಂಡ್ 75 ವರ್ಷಕ್ಕಿಂತ ಹೆಚ್ಚು ವಯಸ್ಸಾದ ನಾಯಕರನ್ನು ರಾಷ್ಟ್ರೀಯ ಚುನಾವಣೆಗೆ ನಿಲ್ಲದಂತೆ ಸೂಚಿಸಿದೆ. ಈ ಮೂಲಕ ಬಿಜೆಪಿಯ ಪ್ರಭಾವಿ ಹಿರಿಯ ನಾಯಕರಲ್ಲಿ ಒಬ್ಬರಾದ ಎಂ.ಎಂ ಜೋಶಿ ಅವರ ಲೋಕಸಭೆಯ ರಾಜಕೀಯ ಪಯಣ ಮುಕ್ತಾಯವಾಗಿದೆ.
Advertisement
Advertisement
ಈ ಬಗ್ಗೆ ಕಾನ್ಪುರ ಜನತೆಗೆ ಪತ್ರ ಬರೆದಿರುವ ಎಂ.ಎಂ ಜೋಶಿ ಅವರು, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಲಾಲ್ ಅವರು ನನ್ನನ್ನು ಭೇಟಿ ಮಾಡಿ, ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸದಿರುವಂತೆ ಸೂಚಿಸಿದ್ದಾರೆ. ಕಾನ್ಪುರ ಮಾತ್ರವಲ್ಲ ಬೇರೆ ಯಾವುದೇ ಕ್ಷೇತ್ರದಿಂದಲೂ ಸ್ಪರ್ಧೆ ಮಾಡಬಾರದು ಎಂದು ಹೇಳಿದ್ದಾರೆ. ಆದರಿಂದ ನಾನು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.
Advertisement
Advertisement
ಜೋಶಿ ಅವರು ಕೇಂದ್ರ ಸಚಿವರಾಗಿ ಹಾಗೂ ಬಿಜೆಪಿ ಅಧ್ಯಕ್ಷರಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ 2014ರಲ್ಲಿ ವಾರಣಾಸಿ ಕ್ಷೇತ್ರವನ್ನು ಪ್ರಧಾನಿ ಮೋದಿ ಅವರಿಗೆ ಬಿಟ್ಟುಕೊಟ್ಟಿದ್ದರು. ಬಳಿಕ 2014ರಲ್ಲಿ ಕಾನ್ಪುರದಿಂದ ಸ್ಪರ್ಧಿಸಿ ಜಯಗಳಿಸಿದ್ದರು.
ಬಿಜೆಪಿ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ ಆಡ್ವಾಣಿ ಅವರ ಜೊತೆ ಸೇರಿ ಪಕ್ಷ ಕಟ್ಟುವಲ್ಲಿ ಜೋಶಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಅಡ್ವಾಣಿ ಸಹ ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅಡ್ವಾಣಿ ಕ್ಷೇತ್ರವಾದ ಗುಜರಾತಿನ ಗಾಂಧಿನಗರದಿಂದ ಅಮಿತ್ ಶಾ ಕಣಕ್ಕೆ ಇಳಿಯಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ಮೇಲೆ 75 ವರ್ಷ ಮೇಲ್ಪಟ್ಟ ಬಿಜೆಪಿ ನಾಯಕರಿಗೆ ಮಾರ್ಗದರ್ಶಕ ಮಂಡಳಿಯಲ್ಲಿ ಸ್ಥಾನ ನೀಡಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಮುರಳಿ ಮನೋಹರ್ ಜೋಷಿ ಈ ಮಾರ್ಗದರ್ಶನ ಮಂಡಳಿಯಲ್ಲಿ ಸ್ಥಾನ ಪಡೆದಿದ್ದರು.