Connect with us

Bengaluru City

ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್ – ಶರವಣ ಹೇಳಿದ್ದು ಏನು?

Published

on

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ದೇವೇಗೌಡ ಅವರ ಹೆಸರಿನಲ್ಲಿ ನಗರದ ಜೆಪಿ ಭವನದಲ್ಲಿ ಆರಂಭವಾಗಿದ್ದ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ಯಾಂಟೀನಿಗೆ ಆಗಮಿಸದೆ ಇರುವುದೇ ಮುಚ್ಚಲು ಕಾರಣ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶರವಣ ತಿಳಿಸಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದ ಶರವಣ ಅವರು, ಜೆಡಿಎಸ್ ಕಚೇರಿಯ ಆವರಣದಲ್ಲಿ ಆರಂಭವಾಗಿದ್ದ ಕ್ಯಾಂಟೀನ್ ಬರೋಬ್ಬರಿ 1 ವರ್ಷ ನಡೆದಿದ್ದು, ಆದರೆ ಕ್ಯಾಂಟೀನ್‍ಗೆ ಹೆಚ್ಚಿನ ಜನರು ಬಾರದ ಕಾರಣ ಆಹಾರ ವ್ಯರ್ಥವಾಗುತ್ತಿದೆ. ದಿನಕ್ಕೆ ಕೇವಲ 50 ರಿಂದ 100 ಜನರು ಮಾತ್ರ ಬರುತ್ತಿದ್ದರು. ಆದ್ದರಿಂದ 20 ದಿನಗಳ ಹಿಂದೆಯೇ ಕ್ಯಾಂಟೀನ್ ಮುಚ್ಚುವ ತೀರ್ಮಾನ ಮಾಡಲಾಗಿತ್ತು ಎಂದರು.

ಇದೇ ವೇಳೆ ಕ್ಯಾಂಟೀನ್ ಮುಚ್ಚಲು ದೇವೇಗೌಡ ಅವರೊಂದಿನ ಅಸಮಾಧಾನ ಕಾರಣ ಎಂಬುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಿರಿಯರಾಗಿದ್ದು, ಅವರೊಂದಿಗೆ ಯಾವುದೇ ಅಸಮಾಧಾನ ಇಲ್ಲ. ಈ ಬಗ್ಗೆ ರೇವಣ್ಣ ಅವರಿಗೆ ತಿಳಿಸಿಯೇ ತೀರ್ಮಾನ ಕೈಗೊಂಡಿದ್ದೇನೆ. ಆದರೆ ನಗರದ ಬೇರೆ ಕಡೆ ಮಾಡಲು ಚಿಂತನೆ ಇದೆ. ಊಟ ವ್ಯರ್ಥವಾಗುತ್ತಿದ್ದ ಕಾರಣವಾಗಿ ಕ್ಲೋಸ್ ಮಾಡಿದ್ದೇನೆ. ಬಸವನಗುಡಿಯಲ್ಲಿ ಇರುವ ಕ್ಯಾಂಟೀನ್‍ನಲ್ಲಿ ಪ್ರತಿ ದಿನ 3,500 ಮಂದಿ ಊಟ ಸೇವಿಸುತ್ತಾರೆ. ದಿನಕ್ಕೆ 100 ಜನರು ಹೆಚ್ಚಾಗುತ್ತಿದ್ದಾರೆ. ಅದ್ದರಿಂದ ಹಸಿದವರಿಗೆ ಊಟ ನೀಡುವ ನನ್ನ ಉದ್ದೇಶ ಮುಂದುವರೆಯುತ್ತದೆ ಎಂದರು.

ಸಚಿವ ಸ್ಥಾನದ ಆಕಾಂಕ್ಷೀಯಾಗಿದ್ದೆ. ಆದರೆ ಈ ಹಂತದಲ್ಲಿ ನನಗೆ ಅವಕಾಶ ನೀಡಲು ಸಾಧ್ಯವಾಗಿಲ್ಲ. ಈ ಬಗ್ಗೆ ನನ್ನ ಸಮಾಜದ ಹಲವರು ಪ್ರಶ್ನೆ ಮಾಡುತ್ತಾರೆ. ಇತ್ತ ಸಿಎಂ ಕುಮಾರಸ್ವಾಮಿ ಅವರಿಗೆ ಸರ್ಕಾರ ನಡೆಸೋದು ಕಷ್ಟ ಆಗುತ್ತಿದೆ. ಸಚಿವ ಸ್ಥಾನ ಬಗ್ಗೆ ದೇವೇಗೌಡರಿಗೂ ತಿಳಿದಿದೆ. ಆದರೆ ಅವರಿಗೂ ಸಮ್ಮಿಶ್ರ ಸರ್ಕಾರದಲ್ಲಿ ಹೆಚ್ಚಿನ ಒತ್ತಡ ಇದೆ. ಪಕ್ಷದ ವಿಚಾರದಲ್ಲಿ ಈ ಕುರಿತು ಚರ್ಚೆ ನಡೆಸಿ ಮುಂದಿನ ಹಂತದಲ್ಲಿ ನಿರ್ಧಾರ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ. ಆದರೆ ನಮ್ಮ ಸಮುದಾಯದ ಜನರು ಈ ಬಗ್ಗೆ ಪ್ರಶ್ನೆ ಮಾಡಿದ ವೇಳೆ ನೋವಾಗುತ್ತದೆ. ಆದರೆ ಕಿತ್ತಾಟ ನಡೆಸಿ ಸಚಿವ ಸ್ಥಾನ ಪಡೆಯುವುದು ಜೆಡಿಎಸ್ ಪಕ್ಷದಲ್ಲಿ ಇಲ್ಲ. ಅದ್ದರಿಂದ ಮುಂದೇ ಸೂಕ್ತ ಸ್ಥಾನಮಾನ ಸಿಗುವ ಬಗ್ಗೆ ವಿಶ್ವಾಸ ಇದೆ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *