ಮೈಸೂರು: ಬಂಡೀಪುರ ಅಭಯಾರಣ್ಯಕ್ಕೆ ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಲಾಗಿದೆ. ಇಲ್ಲದಿದ್ದರೆ ಕಾಡಿಗೆ ಬೆಂಕಿ ಬೀಳಲು ಸಾಧ್ಯವೇ ಇಲ್ಲ ಎಂದು ಸಂಸದ ಪ್ರತಾಪ್ ಸಿಂಹ ಅನುಮಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಕಳೆದ 5 ವರ್ಷಗಳಿಂದ ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶಗಳನ್ನು ನೋಡಿದ್ದೇನೆ. ಬಂಡಿಪುರದ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಯಾವ ಕಾರಣಕ್ಕೆ ಬೆಂಕಿ ತಗುಲಿತು ಅಂತ ತನಿಖೆಯಿಂದ ಪ್ರಕರಣದ ಸತ್ಯಾಂಶ ಹೊರ ಬರಬೇಕಿದೆ. ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿದೆ. ಅರಣ್ಯ ಪ್ರದೇಶದಲ್ಲಿ ಮರ, ಗಿಡಗಳು ಒಣಗಿರುವ ಕಾರಣಕ್ಕೆ ಒಂದು ಬೆಂಕಿ ಕಡ್ಡಿ ಇಟ್ಟರೆ ಇಡೀ ಕಾಡೇ ನಾಶ ಆಗುತ್ತದೆ ಎನ್ನುವ ಸಾಮಾನ್ಯ ಪ್ರಜ್ಞೆ ಇಲ್ಲದೇ ದುಷ್ಕರ್ಮಿಗಳು ಈ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ದೇಶದಲ್ಲಿ ಹುಲಿ ಸಂರಕ್ಷಣೆಗೆ ಸಾಕಷ್ಟು ಯೋಜನೆಗಳು ಜಾರಿಗೆ ಬಂದಿದೆ. ಅತಿ ಹೆಚ್ಚು ಹುಲಿ ಇರೋದು ಬಂಡೀಪುರ ಹಾಗೂ ನಾಗರಹೊಳೆ ಅರಣ್ಯ ಪ್ರದೇಶದಲ್ಲಿ. ಇಲ್ಲೇ ಹುಲಿಗಳ ಸಂರಕ್ಷಣೆ ಮಾಡಲಿಲ್ಲ ಅಂದ್ರೆ ಹೇಗೆ? ಕಾರಿಗಾದ್ರೆ ಇನ್ಸೂರೆನ್ಸ್ ಇರುತ್ತೆ ಪ್ರಾಣಿಗಳಿಗೆ ಇಲ್ಲ. ಇಲ್ಲೇ ಈ ರೀತಿ ಸಂರಕ್ಷಣೆ ಮಾಡಿಲ್ಲ ಅಂದ್ರೆ ಬೇರೆಡೆ ಸಂರಕ್ಷಣೆ ಮಾಡಲು ಆಗುತ್ತಾ? ಇನ್ನು ಮುಂದೆ ಈ ರೀತಿಯ ಅವಘಡ ಎಂದೂ ಆಗಬಾರದು ಆ ರೀತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.
Advertisement
Advertisement
ಈ ರೀತಿ ಅಗ್ನಿ ಅವಘಡಗಳು ನಡೆದಾಗ ಅತ್ಯಾಧುನಿಕ ಯಂತ್ರೋಪಕರಣಗಳನ್ನು ಬಳಸಿ ಬೆಂಕಿ ನಂದಿಸಲು ಮುಂದಾಗಬೇಕು. ಹೆಲಿಕಾಪ್ಟರ್ ಮೂಲಕ ನೀರು ಅಥವಾ ಬೆಂಕಿ ಆರಿಸುವ ಸ್ಪ್ರೇಗಳನ್ನು ಬಳಸುವ ವ್ಯವಸ್ಥೆ ಮಾಡಬೇಕು. ಬಂಡೀಪುರ ಹಾಗೂ ನಾಗರಹೊಳೆ ಅರಣ್ಯವು ಅತಿ ಸೂಕ್ಷ್ಮ ಪ್ರದೇಶ, ಮಳೆಯ ತಾಣವೂ ಹೌದು. ಹಾಗೆಯೇ ಈ ಪ್ರದೇಶ ಪಶ್ಚಿಮ ಘಟ್ಟದ ಅರಣ್ಯಕ್ಕೆ ಸೇರುವುದರಿಂದ ಈ ಪ್ರದೇಶಗಳ ಬಗ್ಗೆ ನಾವು ಕಾಳಜಿ ವಹಿಸಬೇಕು. ಈ ವಿಚಾರದಲ್ಲಿ ನಾನು ಯಾರ ಮೇಲೂ ಆರೋಪ ಪ್ರತ್ಯಾರೋಪ ಮಾಡುವುದಿಲ್ಲ. ತನಿಖೆಯಿಂದ ಸತ್ಯ ಹೊರಬೀಳಲಿದೆ ಎಂದು ಪ್ರತಾಪ್ ಸಿಂಹ ಅಭಿಪ್ರಾಯ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv