– ರಕ್ತ ಸೋರುತ್ತಿದ್ದರೂ ಹೊತ್ತು ವಾಹನದಲ್ಲಿ ಹಾಕಿದ ಪೊಲೀಸರು
– ರಸ್ತೆಯಲ್ಲೇ ಧರಣಿ ಕುಳಿತ ಎಂಎಲ್‌ಸಿ, ರಾತ್ರಿಯಿಡೀ ಜಾಗರಣೆ
ಬೆಳಗಾವಿ: ಇಲ್ಲಿನ ಸುವರ್ಣಸೌಧದಲ್ಲಿ ಡಿ. 19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರಿಗೆ ಅವಾಚ್ಯ ಶಬ್ದಗಳಿಂದ ಬಿಜೆಪಿ ನಾಯಕ ಸಿ.ಟಿ ರವಿ (CT Ravi) ನಿಂದಿಸಿದ್ದು ರಾಜ್ಯ ರಾಜಕೀಯದಲ್ಲಿ ದೊಡ್ಡ ರಾದ್ಧಾಂತವಾಗಿದೆ. ಮಹಿಳೆಯರಿಗೆ ಅಪಮಾನವಾಗುವಂತಹ ಬಳಸಿದ್ದಕ್ಕಾಗಿ ಅವರ ಎಫ್ಐಆರ್ ಕೂಡ ಆಗಿದೆ. ಪೊಲೀಸರು ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ್ದಾರೆ.
ಈ ವೇಳೆ ಸಿ.ಟಿ ರವಿ ಅವರ ಮೇಲೆ ಹಲ್ಲೆಯೂ ನಡೆದ್ದು, ತಲೆಗೆ ಗಾಯವಾಗಿದೆ. ಹಣೆಯಿಂದ ರಕ್ತ ಸೋರುತ್ತಿರುವ ದೃಶ್ಯಗಳು ಕಂಡುಬಂದಿವೆ. ಅಲ್ಲದೇ ಹಣೆಯಲ್ಲಿ ರಕ್ತ ಸೋರುತ್ತಿದ್ದರೂ ಪೊಲೀಸರು ಹೊತ್ತು ಅವರನ್ನು ಜೀಪ್‌ನಲ್ಲಿ ಕೂರಿಸಿರುವ ದೃಶ್ಯಗಳು ಜಾಲತಾಣಗಳಲ್ಲೂ ಸದ್ದು ಮಾಡುತ್ತಿವೆ.
ಖಾನಾಪುರ ಪೊಲೀಸ್ ಠಾಣೆ ಮುಂದೆ ಹೈಡ್ರಾಮಾ:
ಇನ್ನೂ ಸಿ.ಟಿ ರವಿ ಅವರನ್ನ ಬೆಂಗಳೂರಿಗೆ ಕರೆತರುವ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಸಿ.ಟಿ ರವಿ ಅವರನ್ನ ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಸಿ.ಟಿ ರವಿ ಚೀರಾಡಿದ್ದಾರೆ.
ಠಾಣೆ ಮುಂದೆ ಬಿಜೆಪಿ ಪ್ರತಿಭಟನೆ:
ಸಿ.ಟಿ ರವಿ ಬಂಧನ ಖಂಡಿಸಿ ತಡರಾತ್ರಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿರುವ ಆರ್. ಅಶೋಕ್, ರಾಜ್ಯವನ್ನು ಕಾಂಗ್ರೆಸ್‌ನವರು ಮಿನಿ ಪಾಕಿಸ್ತಾನ ಮಾಡಿದ್ದಾರೆ, ಸಿಟಿ ರವಿ ಜನಪ್ರತಿನಿಧಿಯೆಂಬುದನ್ನು ಮರೆತು ಹಲ್ಲೆ ಮಾಡಿದ್ದಾರೆ. ಸಿಟಿ ರವಿ ಹಣೆಗೆ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ, ಪೊಲೀಸರಿಗೆ ನಮ್ಮ ಸರ್ಕಾರ ಬಂದ ಬಳಿಕ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಂಗಳೂರಿಗೆ ಸಿ.ಟಿ ರವಿ:
ಸಚಿವೆಗೆ ನಿಂದನೆ ಆರೋಪದಲ್ಲಿ ಬಂಧನವಾಗಿರುವ ಸಿ.ಟಿ ರವಿ ಅವರನ್ನು ಖಾನಾಪುರದಿಂದ ಕರೆತರುತ್ತಿರುವ ಪೊಲೀಸರು ಇಂದು ಬೆಂಗಳೂರಿಗೆ ಕರೆತರಲಿದ್ದಾರೆ. ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.