KarnatakaLatestMain PostRaichurUncategorized

ಸ್ವಹಿತಾಸಕ್ತಿಗೆ ರಸ್ತೆ ದಿಕ್ಕನ್ನೇ ಬದಲಿಸಿದ ಎಂಎಲ್‍ಸಿ ಎನ್.ಎಸ್.ಬೋಸರಾಜು?

ರಾಯಚೂರು: ಅನುದಾನ ಬಿಡುಗಡೆಯಾದ ಸ್ಥಳದಲ್ಲೇ ಸರಿಯಾದ ರಸ್ತೆ ನಿರ್ಮಾಣವಾಗುವುದು ಕಠಿಣ. ಆದ್ರೆ ರಾಯಚೂರಿನಲ್ಲಿ ಯಾವ ಯೋಜನೆಯಲ್ಲೂ ಇಲ್ಲದ ಜಾಗದಲ್ಲಿ ಭರ್ಜರಿ ರಸ್ತೆ ನಿರ್ಮಾಣವಾಗಿದೆ. ಇದು ಹೇಗೆ ಸಾಧ್ಯ ಅಂತ ಗಾಬರಿಯಾಗಬೇಡಿ. ಇಲ್ಲಿನ ವಿಧಾನ ಪರಿಷತ್ ಸದಸ್ಯರೊಬ್ಬರ ಕೈಚಳಕದಿಂದ ಈ ಪವಾಡ ನಡೆದಿದೆ.

ಸರ್ಕಾರದ ದಾಖಲೆಗಳ ಪ್ರಕಾರ ರಾಯಚೂರಿನಿಂದ ಮಲಿಯಾಬಾದ್ ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ 0.80 ಕಿ.ಮೀ ಡಾಂಬರ್ ರಸ್ತೆ ಹಾಗೂ 100 ಮೀಟರ್ ಸಿಸಿ ರಸ್ತೆಯಾಗಿದೆ. ಆದ್ರೆ ವಾಸ್ತವದಲ್ಲಿ ಇಲ್ಲಿ ಅಂತಹದ್ದೇನು ಇಲ್ಲ. ಇಲ್ಲಿ ನಡೆದಿದೆ ಎನ್ನಲಾದ ರಸ್ತೆ ಕಾಮಗಾರಿ ರಾಯಚೂರಿನ ನಗರಸಭೆ ವಾರ್ಡ್ ಸಂಖ್ಯೆ 3 ರಲ್ಲಿ ಬರುವ ಮಾರುತಿ ಬಡಾವಣೆಯಲ್ಲಿ ಪೂರ್ಣಗೊಂಡಿದೆ. ವಿಧಾನ ಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ಸ್ವಹಿತಾಸಕ್ತಿಯಿಂದಾಗಿ ಗ್ರಾಮೀಣ ಭಾಗದಲ್ಲಿ ನಿರ್ಮಿಸಬೇಕಾದ ರಸ್ತೆಯನ್ನ ನಗರದಲ್ಲಿ ನಿರ್ಮಿಸಲಾಗಿದೆ.

ಬೋಸರಾಜುಗೆ ಸೇರಿದ ಜಾಗ ಇರುವುದರಿಂದ ಹಾಗೂ ಅವರೇ ದಾನ ನೀಡಿದ ಜಾಗದಲ್ಲಿರುವ ಟ್ಯಾಗೋರ್ ಪಾಲಿಟೆಕ್ನಿಕ್ ಕಾಲೇಜ್‍ಗೆ ಅನುಕೂಲವಾಗಲು ಯೋಜನೆ ದಿಕ್ಕನ್ನೆ ಬದಲಿಸಿದ್ದಾರೆ. 2015-16ನೇ ಸಾಲಿನ ಮುಖ್ಯಮಂತ್ರಿ ಗ್ರಾಮೀಣ ರಸ್ತೆ ಅಭಿವೃದ್ದಿ ಯೋಜನೆ ಹಣ ದುರುಪಯೋಗವಾಗಿದೆ. ಇದಕ್ಕೆ ನೇರಹೋಣೆ ಎನ್.ಎಸ್.ಬೋಸರಾಜು ಅಂತ ಸ್ಥಳೀಯ ಹೋರಾಟಗಾರರು ಆರೋಪಿಸಿದ್ದಾರೆ.

2014 ರಲ್ಲಿ ಎನ್.ಎಸ್.ಬೋಸರಾಜು ಗ್ರಾಮೀಣಾಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಿ ಮಲಿಯಾಬಾದ್ ಗ್ರಾಮಕ್ಕೆ ರಸ್ತೆ ನಿರ್ಮಿಸಲು 25 ಲಕ್ಷ ರೂಪಾಯಿ ಅನುದಾನಕ್ಕೆ ಅನುಮೋದನೆ ಪಡೆದಿದ್ದಾರೆ. ಆದ್ರೆ ಬಳಿಕ ರಸ್ತೆ ಕಾಮಗಾರಿಯನ್ನ ಮಲಿಯಾಬಾದ್ ಗ್ರಾಮದಲ್ಲಿ ಮಾಡದೇ ನಗರ ಪ್ರದೇಶದಲ್ಲಿ ಮಾಡುವ ಮೂಲಕ ಅಧಿಕಾರಿಗಳು ಹಾಗೂ ಗುತ್ತಿಗೆದಾರ ಮೆಹಬೂಬ್ ಅಲಿಖಾನ್ ನಿಯಮ ಉಲ್ಲಂಘಿಸಿದ್ದಾರೆ. ದಾಖಲೆಗಳಲ್ಲಿ ಮಾರುತಿ ಬಡಾವಣೆ ಭಾವಚಿತ್ರ ಅಂಟಿಸಿ ಮಲಿಯಾಬಾದ್ ಅಂತ ತೋರಿಸಿದ್ದಾರೆ. ಎನ್.ಎಸ್.ಬೋಸರಾಜುಗೆ ಹೆದರಿ ಅಧಿಕಾರಿಗಳು ಕರ್ತವ್ಯಲೋಪವೆಸಗಿದ್ದಾರೆ ಎಂದು ಜಿಲ್ಲಾ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ರಾಜುಪಟ್ಟಿ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಎಸಿಬಿಗೆ ದೂರು ನೀಡಿದ್ದಾರೆ.

ಗ್ರಾಮೀಣ ಭಾಗದ ಅಭಿವೃದ್ದಿಗೆ ಮೀಸಲಾದ ಅನುದಾನದ ರಸ್ತೆ ಕಾಮಗಾರಿಯಲ್ಲಿ ಗೋಲ್ ಮಾಲ್ ಮಾಡಿರುವುದಂತೂ ದಾಖಲೆಗಳಿಂದ ಮೇಲ್ನೋಟಕ್ಕೆ ಸಾಬೀತಾಗಿದೆ. ವಿಧಾನಪರಿಷತ್ ಸದಸ್ಯ ಎನ್.ಎಸ್.ಬೋಸರಾಜು ನಿಜಕ್ಕೂ ಪ್ರಭಾವ ಬೀರಿದ್ದು ಯಾಕೆ ಅನ್ನೋದು ಬೆಳಕಿಗೆ ಬರಬೇಕಿದೆ. ನಿಯಮ ಉಲ್ಲಂಘಿಸಿದ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಿದೆ.

Leave a Reply

Your email address will not be published. Required fields are marked *

Back to top button