– ಬೇಕಿದ್ದರೆ ದುಡ್ಡು ಕೊಟ್ಟು ಟಿಕೆಟ್ ಪಡೆಯಲಿ
– ರಂಜಾನ್ ವೇಳೆ ಎಲ್ಲಿಯಾದ್ರೂ ಕಲ್ಲು ಬಿದ್ದಿದ್ಯಾ?
ಕೋಲಾರ: ನಮಗೆ ಐಪಿಎಲ್ (IPL) ಟಿಕೆಟ್ ಬೇಕು ಎಂದು ಕೇಳುವ ಶಾಸಕರಿಗೆ ನಾಚಿಕೆಯಾಗಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಕಿಡಿಕಾರಿದ್ದಾರೆ.
ಕೋಲಾರದಲ್ಲಿ ಶ್ರೀರಾಮಸೇನೆ ಸಂಘಟನೆಯ ಶೋಭಾಯಾತ್ರೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ರಿಯಾಯಿತಿ ಬೇಕು. ಮೀಸಲಾತಿ ಬೇಕು, ಟಿಕೆಟ್ ವೀಕ್ಷಿಸಲು ಮುಂದಿನ ವಿಐಪಿ ಚೇರ್ ಬೇಕು ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಸದನದಲ್ಲಿ ಅಯಾ ಕ್ಷೇತ್ರದ ಸಮಸ್ಯೆಗಳು, ನೀರಾವರಿ ಯೋಜನೆಗಳು, ಕೈಗಾರಿಕೆಗಳ ಬಗ್ಗೆ ಚರ್ಚೆಯಾಗಬೇಕು. ಅದು ಬಿಟ್ಟು 5, 10 ಟಿಕೇಟ್ ಬೇಕು ಎನ್ನುವುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಟಿಕೆಟ್ ಬೇಕಿದ್ದರೆ ದುಡ್ಡು ಪಾವತಿಸಿ ಹೋಗಲಿ. ಈ ರೀತಿಯ ಚರ್ಚೆಗಳಿಂದ ಶಾಸಕರ ಘನತೆ ಕಡಿಮೆಯಾಗುತ್ತಿದೆ ಎಂದು ಅಸಮಾಧಾನ ಹೊರಹಾಕಿದರು.
ಶಾಸಕರು ಸಾರ್ವಜನಿಕರ ಕೆಲಸ ಮಾಡಬೇಕು. ವಿಧಾನ ಸೌಧದಲ್ಲೂ ಅರೋಗ್ಯಕರ ಚರ್ಚೆಗಳು ಆಗುತ್ತಿಲ್ಲ. ಯಾವುದೋ ಉತ್ತಮ ವಿಷಯಗಳ ಬಗ್ಗೆ ಚರ್ಚೆ ನಡೆದರೆ ಗಲಾಟೆ ಆಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿಗೆ ಕಳುಹಿಸಿಲ್ಲ ಯಾಕೆ? ಗುಜರಾತಿಗೆ ಯಾಕೆ ತೈಲ ಟ್ಯಾಂಕರ್ ಹೋಗಬೇಕಿತ್ತು?- ಡಿಕೆಶಿ ಕಿಡಿ
ಮೀಸಲಾತಿ ರದ್ದು:
ನಾನು ಮುಖ್ಯಮಂತ್ರಿಯಾದರೆ ರಾಜ್ಯದಲ್ಲಿ ಮುಸ್ಲಿಂ (Muslim Reservation) ಸಮುದಾಯದ ಮೀಸಲಾತಿ ರದ್ದು ಮಾಡುತ್ತೇನೆ. ಆ ಮೀಸಲಾತಿಯನ್ನು ದಲಿತರಿಗೆ, ಹಿಂದುಳಿದ ವರ್ಗಕ್ಕೆ ನೀಡುತ್ತೇನೆ. ಮುಸ್ಲಿಮರಿಗೆ ಧರ್ಮಾದಾರಿತ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.
ರಂಜಾನ್ ವೇಳೆಯಲ್ಲಿ ಎಲ್ಲಾದರೂ ಕಲ್ಲು ಬಿದ್ದಿದ್ಯಾ? ಗಣೇಶ ಹಬ್ಬ, ಹಿಂದೂಗಳ ಮೆರವಣಿಗೆ ಮೇಲೆ ಯಾಕೆ ಇವರಿಗೆ ಸಿಟ್ಟು? ಹಿಂದೂಗಳು ಪ್ರತಿಯೊಂದಕ್ಕೂ ಅನುಮತಿ ಪಡೆಯಬೇಕು. ಆದರೆ ಮುಸ್ಲಿಮರಿಗೆ ಯಾವುದೇ ಕಾನೂನು ಅಡ್ಡಿಯಿಲ್ಲ. ರಾಜ್ಯದಲ್ಲಿ ಮುಂದೆ ಹಿಂದೂಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ನಾಟಕ ಆಡುವವರು ಬೇಡ ಎಂದು ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಯಾದರೆ ಖಂಡಿತ ಅಧಿಕಾರಕ್ಕೆ ಬರುತ್ತದೆ. ಮೇನಲ್ಲಿ ಚಿತ್ರದುರ್ಗದಲ್ಲಿ ಜಾಗೃತ ಹಿಂದೂ ಸಮಾಜೋತ್ಸವ ಕಾರ್ಯಕ್ರಮ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಪಾಕಿಸ್ತಾನ ಮಾದರಿಯ ಸರ್ಕಾರವಿದ್ದು ಬರೀ ಅಲ್ಪಸಂಖ್ಯತರ ಪರವಾಗಿದೆ. ರಾಜ್ಯ ಬಜೆಟ್ನಲ್ಲಿ ದಲಿತರು, ಕುರುಬರು ಸೇರಿ ಯಾವುದೇ ಸಮಾಜಕ್ಕೂ ಅನುದಾನ ನೀಡಿಲ್ಲ ಎಂದು ಕಿಡಿಕಾರಿದರು.

