ಮುಂಬೈ: ರಾಜ್ಯದಲ್ಲಿ ಮತ್ತೆ ರೆಸಾರ್ಟ್ ರಾಜಕೀಯ ಶುರುವಾಗಿದ್ದು, ರಾಜೀನಾಮೆ ನೀಡಿ ಪ್ರಯಾಣ ಬೆಳೆಸಿದ್ದ ಕಾಂಗ್ರೆಸ್-ಜೆಡಿಎಸ್ ಅತೃಪ್ತ ಶಾಸಕರು ಶನಿವಾರ ರಾತ್ರಿ ಮುಂಬೈನ ಐಷಾರಾಮಿ ಹೋಟೆಲ್ ತಲುಪಿದ್ದಾರೆ.
ಹಳ್ಳಿಹಕ್ಕಿ ವಿಶ್ವನಾಥ್ ನೇತೃತ್ವದಲ್ಲಿ 11 ಮಂದಿ ಶಾಸಕರು ಮುಂಬೈ ತಲುಪಿದ್ದಾರೆ. ಮುಂಬೈನ 7 ಸ್ಟಾರ್ ಸೊಫಿಟೆಲ್ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಗೋಕಾಕ್‍ನ ರಮೇಶ್ ಜಾರಕಿಹೊಳಿ, ಹಿರೇಕೆರೂರಿನ ಬಿ.ಸಿ. ಪಾಟೀಲ್, ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್, ಯಲ್ಲಾಪುರದ ಶಿವರಾಮ್ ಹೆಬ್ಬಾರ್, ಅಥಣಿಯ ಮಹೇಶ್ ಕುಮಟಳ್ಳಿ, ಹುಣಸೂರಿನ ಎಚ್. ವಿಶ್ವನಾಥ್, ಕೆ.ಆರ್.ಪೇಟೆಯ ನಾರಾಯಣಗೌಡ, ಮಹಾಲಕ್ಷ್ಮಿ ಲೇಔಟ್‍ನ ಗೋಪಾಲಯ್ಯ, ಬಿಟಿಎಂ ಲೇಔಟ್‍ನ ರಾಮಲಿಂಗಾರೆಡ್ಡಿ, ಯಶವಂತಪುರದ ಎಸ್.ಟಿ ಸೋಮಶೇಖರ್, ಕೆ.ಆರ್. ಪುರಂನ ಭೈರತಿ ಬಸವರಾಜ್ ರಾಜೀನಾಮೆ ನೀಡಿದ್ದು ಮುಂಬೈಗೆ ಹೋಗಿದ್ದಾರೆ. ಆದರೆ ಆರ್.ಆರ್ ನಗರದ ಮುನಿರತ್ನ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ ಹಾಗೂ ವಿಜಯನಗರದ ಆನಂದ ಸಿಂಗ್ ಅವರು ರಾಜೀನಾಮೆ ನೀಡಿದ್ದರೂ ಮುಂಬೈಗೆ ಹೋಗಿಲ್ಲ.
Advertisement
Advertisement
ಸೊಫಿಟೆಲ್ ಹೋಟೆಲ್‍ನ ವಿಶೇಷತೆ
ಮುಂಬೈನಲ್ಲಿರುವ ಐಷಾರಾಮಿ ಹೋಟೆಲ್‍ಗಳಲ್ಲಿ ಸೊಫಿಟೆಲ್ ಕೂಡ ಒಂದಾಗಿದೆ. ಒಟ್ಟು 302 ರೂಮ್‍ಗಳಿದ್ದು, ಅದರಲ್ಲಿ 165 ರೂಮ್‍ಗಳು ಐಷಾರಾಮಿ ರೂಮ್‍ಗಳಾಗಿವೆ. ಒಂದು ದಿನಕ್ಕೆ 8 ಸಾವಿರದಿಂದ 1.5 ಲಕ್ಷ ರೂ. ದರದಲ್ಲಿ ಕೊಠಡಿಗಳು ಸಿಗುತ್ತದೆ. ಸ್ಪಾ, ವಿಶೇಷ ಊಟದ ವ್ಯವಸ್ಥೆ ಮತ್ತು ವಾಹನದ ಅನುಕೂಲತೆಯನ್ನ ಹೊಂದಿದೆ. ಅತೃಪ್ತ ಶಾಸಕರಿಗಾಗಿಯೇ ವಿಶೇಷ ಭೋಜನ ಸಿದ್ಧತೆಗೆ ಸೂಚಿಸಲಾಗಿದೆ. ಮುಂಬೈ ಬಿಜೆಪಿ ಯುವಘಟಕ ಅತೃಪ್ತ ಶಾಸಕರ ಉಸ್ತುವಾರಿ ವಹಿಸಿಕೊಂಡಿದೆ ಎಂದು ತಿಳಿದು ಬಂದಿದೆ.