ಶಾಸಕರು ಅನರ್ಹಗೊಂಡಿದ್ದು ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದೆ: ಹೊರಟ್ಟಿ

Public TV
1 Min Read
horatti

ಧಾರವಾಡ: ಅತೃಪ್ತ ಶಾಸಕರ ಅನರ್ಹತೆ ನಿರ್ಧಾರ ಬಿಜೆಪಿಗೆ ಒಳಗೊಳಗೇ ಖುಷಿ ಕೊಟ್ಟಿದ್ದು, ಅತೃಪ್ತರ ಕಾಟ ಬಿಜೆಪಿಗೆ ತಪ್ಪಿದಂತಾಗಿದೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಧಾರವಾಡದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಪೀಕರ್ ರಮೇಶ್ ಕುಮಾರ್ ತಮ್ಮ ಇತಿ ಮಿತಿಯಲ್ಲಿ ಕಾಯಿದೆ, ಕಾನೂನು ನೋಡಿಕೊಂಡು ಅತೃಪ್ತ ಶಾಸಕರನ್ನು ಅನರ್ಹ ಮಾಡಿದ್ದಾರೆ. ಅವರು ಸುಪ್ರಿಂಕೋರ್ಟ್‍ಗೆ ಹೋದರೆ ಯಾವುದು ಸರಿ? ತಪ್ಪು ಎನ್ನುವುದು ತಿಳಿಯುತ್ತದೆ. ಒಂದು ಪಕ್ಷದಿಂದ ಸ್ಪರ್ಧಿಸಿ ತಮಗೆ ಬೇಕಾದಾಗ ರಾಜೀನಾಮೆ ನೀಡುವುದು ಸರಿಯಲ್ಲ. ಈ ವಿಚಾರವಾಗಿ ಸ್ಪೀಕರ್ ಒಳ್ಳೆ ನಿರ್ಣಯ ಮಾಡಿದ್ದಾರೆ ಎಂದು ಅಭಿಪ್ರಾಯಪಟ್ಟರು.

Speaker Ramesh Kumar 1

ಒಂದು ಪಕ್ಷದಿಂದ ಗೆದ್ದು ನಂತರ ರಾಜೀನಾಮೆ ನೀಡಿದರೆ ಮುಂದಿನ ಐದು ವರ್ಷದ ಅವಧಿಯೊಳಗೆ ಯಾವುದೇ ಚುನಾವಣೆಗೆ ಸ್ಪರ್ಧಿಸಬಾರದು ಅಂತಹ ಕಾನೂನು ಜಾರಿಯಾಗಬೇಕು. ಈ ಮೂಲಕ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನು ಬರಬೇಕು. ಇಂತಹ ಒಂದು ಕಾನೂನನ್ನು ಮೋದಿಯವರೇ ತರಬೇಕು. ಮೋದಿಯವರು ದೇಶದ ಬಗ್ಗೆ ಬಹಳ ಮಾತನಾಡುತ್ತಾರೆ ಹೀಗಾಗಿ ರಾಜಕಾರಣದಲ್ಲಿ ಕಟ್ಟುನಿಟ್ಟಿನ ಕಾನೂನನ್ನು ಅವರೇ ತರಬೇಕು ಎಂದು ಆಗ್ರಹಿಸಿದರು.

ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ
ಶಾಸಕರ ಕುದುರೆ ವ್ಯಾಪಾರ ವಿಚಾರವಾಗಿ ರಾಷ್ಟ್ರಪತಿಗೆ ಪತ್ರ ಬರೆಯುತ್ತೇನೆ. ಸ್ಪೀಕರ್ ನಡೆ ಬಗ್ಗೆ ಬಿಜೆಪಿ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಎಲ್ಲ ಕಾಯ್ದೆ ಕಾನೂನು ನೋಡಿ ಅವರು ಅನರ್ಹ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ಕೊಟ್ಟ ಬಳಿಕ ಅವರು ಸದನದಲ್ಲಿ ಇರಬೇಕಿತ್ತು. ಹೀಗಾಗಿ ರಾಜೀನಾಮೆ ಅಂಗೀಕರಿಸದೇ ಅನರ್ಹ ಮಾಡಲಾಗಿದೆ. ರಾಜೀನಾಮೆ ಕೊಟ್ಟು ಮನೆಯಲ್ಲಿ ಕುಳಿತಿದ್ದರೆ ಅಂಗೀಕಾರ ಆಗುತಿತ್ತು. ಆದರೆ, ಅವರು ನಿಯಮ ಪಾಲಿಸಿಲ್ಲ. ಎಲ್ಲರೂ ಒಟ್ಟಾಗಿ ಮುಂಬೈ ಹೋಟೆಲ್‍ಗೆ ತೆರಳಿದ್ದಾರೆ. ಹೀಗಾಗಿ ರಾಜೀನಾಮೆ ಅಂಗೀಕಾರ ಬದಲಿಗೆ ಅನರ್ಹ ಮಾಡಿದ್ದಾರೆ ಎಂದು ತಿಳಿಸಿದರು.

Rebel MLAs C 1

ಬಿಜೆಪಿಗೆ ಜೆಡಿಎಸ್ ನೈತಿಕ ಬೆಂಬಲ ನೀಡುವ ಕುರಿತು ಪ್ರತಿಕ್ರಿಯಿಸಿದ ಅವರು, ಸದ್ಯ ಬಿಜೆಪಿ ಬಳಿ ಕಡಿಮೆ ಬಹುಮತ ಇದೆ. ಹೊತ್ತು ಬಂದಂತೆ ಕೊಡೆ ಹಿಡಿಯೋದು ಸರಿಯಲ್ಲ. ಜಿ.ಟಿ. ದೇವೇಗೌಡರು ಬಿಜೆಪಿ ನೈತಿಕ ಬೆಂಬಲ ಕೊಡೋ ವಿಚಾರ ಹೇಳಿದ್ದು ಸರಿಯಲ್ಲ ಎಂದರು.

Share This Article
Leave a Comment

Leave a Reply

Your email address will not be published. Required fields are marked *