ಮಂಡ್ಯ: ಗ್ರಾಮ ದೇವತೆಗಳ ತೆಪ್ಪೋತ್ಸವ ಕಾರ್ಯಕ್ರಮದಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಯುವಕನನ್ನು ಶಾಸಕರು ರಕ್ಷಿಸಿದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿಂಡೇನಹಳ್ಳಿ ಕೆರೆಯಲ್ಲಿ ನಡೆದಿದೆ.
20 ವರ್ಷಗಳ ನಂತರ ತುಂಬಿದ್ದ ಕೆರೆಯಲ್ಲಿ ಭಾನುವಾರ ಗ್ರಾಮಸ್ಥರು ತೆಪ್ಪೋತ್ಸವ ಕಾರ್ಯಕ್ರಮ ಆಯೋಜಿಸಿದ್ದರು. ಈ ವೇಳೆ ದೇವರ ಉತ್ಸವ ಮೂರ್ತಿಗಳನ್ನು ಹೊತ್ತ ತೆಪ್ಪ ಕೆರೆ ಪ್ರವೇಶಿಸಿದೆ. ಈ ಸಂದರ್ಭದಲ್ಲಿ ಶಾಸಕ ಸುರೇಶ್ ಗೌಡ ಹಾಗೂ ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ ಸೇರಿದಂತೆ ಕೆಲವರು ಮತ್ತೊಂದು ಬೋಟ್‍ನಲ್ಲಿ ವಿಹಾರ ಹೊರಟಿದ್ದರು.
Advertisement
Advertisement
ಶಾಸಕರ ಬೋಟ್ ಹೋಗುತ್ತಿದ್ದಂತೆ ಬಿಂಡೇನಹಳ್ಳಿಯ ಅಭಿ ಹಾಗೂ ಕುಶಾಲ್ ಎಂಬ ಇಬ್ಬರು ಯುವಕರು ಕೆರೆಯಲ್ಲಿ ಈಜಲು ಧುಮುಕಿದ್ದಾರೆ. ಸ್ವಲ್ಪ ದೂರ ಹೋಗುತ್ತಿದ್ದಂತೆ ಅಭಿ ಎಂಬ ಯುವಕ ಕಾಪಾಡಿ ಕಾಪಾಡಿ ಎಂದು ಕೂಗಿಕೊಂಡು ಈಜಲಾರದೆ ಕೆರೆಯ ನೀರಿನಲ್ಲಿ ಮುಳುಗಲಾರಂಭಿಸಿದ್ದನು.
Advertisement
Advertisement
ಯುವಕನ ಕೂಗು ಹಾಗೂ ದಡದ ಮೇಲಿದ್ದ ಗ್ರಾಮಸ್ಥರ ಕೂಗಾಟ ಕೇಳಿಸಿಕೊಂಡ ಶಾಸಕ ಸುರೇಶ್ ಗೌಡ ತಾವಿದ್ದ ಬೋಟ್ ಅನ್ನು ಮುಳುಗುತ್ತಿದ್ದ ಯುವಕನ ಕಡೆಗೆ ತಂದಿದ್ದಾರೆ. ಅಷ್ಟರಲ್ಲಿ ಯುವಕ ಒಂದು ಕೈ ಮೇಲೆತ್ತಿ ಸಂಪೂರ್ಣವಾಗಿ ಮುಳುಗುವ ಹಂತದಲ್ಲಿದ್ದ ಕೂಡಲೇ ಆತನ ಕೈ ಹಿಡಿದ ದಡ ಸೇರಿಸಿದ್ದಾರೆ.
ಯುವಕನಿಗೆ ನಾಗಮಂಗಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ.