ವಿಜಯಪುರ: ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಪಕ್ಷದಿಂದ ಉಚ್ಚಾಟನೆ ಆಯ್ತು. ಎಲ್ಲ ಮುಗೀತು ಅಂತಾ ಯತ್ನಾಳ್ ವಿರೋಧಿ ಬಣ ಖುಷಿಯಾಗಿತ್ತು. ಬಿಜೆಪಿ ಹೈಕಮಾಂಡ್ ಕೂಡ ನಾವು ದೊಡ್ಡ ಶಾಕ್ ಹೊಡೆದಿದ್ದೇವೆ ಅಂತ ಬೀಗುತ್ತಿತ್ತು. ಆದ್ರೆ ನಾಲ್ಕು ದಿನ ಸೈಲೆಂಟ್ ಆಗಿದ್ದ ಯತ್ನಾಳ್ ಇದೀಗ ಮತ್ತೆ ರೆಬೆಲ್ ಆಗಿದ್ದಾರೆ. ಯಡ್ಡಿಯೂರಪ್ಪ, ವಿಜಯೇಂದ್ರಗೆ ಟಾಂಗ್ ಕೊಡುವ ಜೊತೆಗೆ ಹೈಕಮಾಂಡ್‌ಗೂ ಶಾಕ್ ನೀಡಿದ್ದಾರೆ.
ವಿಜಯಪುರ ನಗರ ಶಾಸಕ, ಹಿಂದುತ್ವದ ಫೈರ್ ಬ್ರಾಂಡ್ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಛಾಟನೆಯಾಗಿ ಐದು ದಿನ ಕಳೆದಿದೆ. ಸ್ವಕ್ಷೇತ್ರ ವಿಜಯಪುರದಲ್ಲಿ ಯುಗಾದಿ ಆಚರಿಸಿದ್ರು. ಬಳಿಕ ಮಾತನಾಡಿದ ಯತ್ನಾಳ್ ಮತ್ತೆ ತಮ್ಮದೇ ದಾಟಿಯಲ್ಲಿ ಯಡಿಯೂರಪ್ಪ, ವಿಜಯೇಂದ್ರ (BY Vijayendra) ವಿರುದ್ಧ ಗುಡುಗಿದ್ದಾರೆ. ಯಡಿಯೂರಪ್ಪ (BS Yediyurappa) ತನ್ನ ಮಗನ ಸ್ವಾರ್ಥಕ್ಕಾಗಿ ಹಿಂದೂ ನಾಯಕರನ್ನು ತುಳಿದುಕೊಂಡು ಬಂದಿದ್ದಾರೆ. ಈಗಲೂ ಸಹ ಯಡಿಯೂರಪ್ಪ-ವಿಜಯೇಂದ್ರ ರಾಜಕೀಯ ವಂಶ ಪರಂಪರೆ ಮುಂದುವರೀಬೇಕು ಅಂತಲೇ ನನ್ನ ತುಳಿಯೋ ಕೆಲಸ ಮಾಡ್ತಿದ್ದಾರೆ. ಹೈಕಮಾಂಡ್‌ಗೆ ವಿನಂತಿ ಮಾಡ್ತೀನಿ. ಈ ಕುಟುಂಬ ರಾಜಕಾರಣ, ಭ್ರಷ್ಟಾಚಾರಿಗಳನ್ನು ತೆಗೆದು ಹಾಕದಿದ್ದರೆ ಜನರ ವಿಶ್ವಾಸ ಹೋಗತ್ತೆ. ವಿಜಯೇಂದ್ರನೇ ಮುಂದಿನ ಮುಖ್ಯಮಂತ್ರಿ ಎಂದು ನೀವು ಬಿಂಬಿಸೋದಾದರೆ ರಾಜ್ಯದ ಜನ ರಾಜ್ಯದ ಅಭಿವೃದ್ಧಿಗೆ, ಭ್ರಷ್ಟಾಚಾರ ರಹಿತ, ಸನಾತನ ಧರ್ಮ ರಕ್ಷಣೆ ಮಾಡುವ ನಿರ್ಣಯ ಕೈಗೊಳ್ಳುತ್ತಾರೆ ಎಂದು ಮತ್ತೆ ಯಡಿಯೂರಪ್ಪ, ವಿಜಯೇಂದ್ರ ವಿರುದ್ಧ ಮುಗಿಬಿದ್ರು. ಅಲ್ಲದೇ ವಿಜಯೇಂದ್ರನನ್ನ ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಿದ್ರೆ ನೂತನ ಹಿಂದೂ ಪಕ್ಷ ಅಸ್ತಿತ್ವಕ್ಕೆ ಬರೋದು ನಿಶ್ಚಿತ ಅಂತ ಹೊಸ ಬಾಂಬ್ ಹಾಕಿದ್ರು.
ನೂತನ ಪಕ್ಷ ವಿಜಯದಶಮಿಗೆ ಅಸ್ತಿತ್ವಕ್ಕೆ ಬರುತ್ತೆ ಅಂತಾ ಹೇಳೋ ಮೂಲಕ ಒಂದು ಕಡೆ ಯಡಿಯೂರಪ್ಪ ಹಾಗೂ ವಿಜಯೇಂದ್ರಗೆ ಯತ್ನಾಳ್ ಚೆಕ್‌ಮೇಟ್ ಕೊಡುವುದರ ಜೊತೆಗೆ ಹೈಕಮಾಂಡ್‌ಗೂ (BJP High command) ಶಾಕ್ ಕೊಟ್ಟಿದ್ದಾರೆ. ಯಾವುದೇ ಹೊಸ ಪಕ್ಷ ಕಟ್ಟಲ್ಲ, ಬಿಜೆಪಿಯಲ್ಲೇ ಮುಂದುವರಿಯುತ್ತೇನೆ ಅಂತಾ ಹೇಳಿದ್ದ ಯತ್ನಾಳ್ ಒಂದೇ ದಿನದಲ್ಲಿ ಮತ್ತೆ ಪ್ಲ್ಯಾನ್ ಚೇಂಜ್ ಮಾಡಿದ್ದು ಅನ್ನೋದೇ ಕುತೂಹಲ. ಜೊತೆಗೆ ಜನಜಾಗೃತಿ ಮಾಡ್ತೇನೆ. ಜನರ ಬಳಿ ಹೋಗ್ತೆನೆ ಅಂತಾ ಹೇಳುತ್ತಿದ್ದು, ಹೊಸ ಪಕ್ಷ ಕಟ್ಟುವ ಮುನ್ಸೂಚನೆ ಕೊಟ್ಟಂತಿದೆ. ಇದರ ಜೊತೆಗೆ ಉತ್ತರ ಕರ್ನಾಟಕದಿಂದ ಪತ್ಯೇಕ ಪಕ್ಷ ಕಟ್ಟುವ ಮಾತನ್ನ ಯತ್ನಾಳ್ ಹೇಳಿದ್ದು ಯತ್ನಾಳ್ ಟೀಂ ಬಿಗ್ ಪ್ಲಾನ್ ಮಾಡಿರೋದು ಇದರಿಂದ ಸ್ಪಷ್ಟವಾಗುತ್ತೆ..
`ಹೊಂದಾಣಿಕೆ ರಾಜಕಾರಣದ ವಿರುದ್ಧ ಹೋರಾಟ’
ತಮ್ಮ ಮುಂದಿನ ಹೋರಾಟ ಬಗ್ಗೆ ಸಂಕಲ್ಪ ಪತ್ರ ಹೆಸರಿನಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಯತ್ನಾಳ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೇ ತಮ್ಮನ್ನು ಬೆಂಬಲಿಸಿದವರಿಗೆ ಕೃತಜ್ಞತೆ ತಿಳಿಸಿದ್ದಾರೆ.
ಬಂಧುಗಳೇ….
ಜನ ಸೇವೆ ಮಾಡದೆ, ಪ್ರಜೆಗಳ ಕಷ್ಟ ಕಾರ್ಪಣ್ಯಕ್ಕೆ ಧ್ವನಿಯಾಗದೆ, ತಮ್ಮ ರಾಜಕೀಯ ಅಭ್ಯುದಯಕ್ಕೆ ಹೊಂದಾಣಿಕೆ ರಾಜಕಾರಣ ಮಾಡುವವರ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಮಹಾಭಾರತದಲ್ಲಿ ಜಯಗಳಿಸಿದ್ದು ಕೃಷ್ಣಾರ್ಜುನರೇ ಹೊರತು ಶಕುನಿ ಹಾಗೂ ಧೃತರಾಷ್ಟ್ರರಲ್ಲ. ರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣದ ವಿರುದ್ಧ ನಮ್ಮೆಲ್ಲರ ಹೋರಾಟ ಆರಂಭವಾಗಲಿದೆ. ಅಲ್ಲದೆ ರಾಮರಾಜ್ಯ ಸ್ಥಾಪನೆ, ಉತ್ತರ ಕರ್ನಾಟಕದ ಅಭಿವೃದ್ಧಿ, ನೀರಾವರಿ, ಗೋರಕ್ಷಣೆ, ಕನ್ನಡ ಮಾಧ್ಯಮ ಪರೀಕ್ಷಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ, ಬಾಣಂತಿಯರ ಸಾವು, ಲವ್ ಜಿಹಾದ್, ವಕ್ಫ್ ವಿರುದ್ಧ ನನ್ನ ಹೋರಾಟವನ್ನು ತೀಕ್ಷ್ಣಗೊಳಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇನೆ. ಜಾಲತಾಣದ ಮೂಲಕ ತಮ್ಮ ಶುಭ ಹಾರೈಕೆಗಳನ್ನು, ಬೆಂಬಲ, ಪ್ರೋತ್ಸಾಹವನ್ನು ತೋರಿಸುತ್ತಿರುವ ಎಲ್ಲಾ ಸಹೃದಯೀ ಸ್ನೇಹಿತರಿಗೂ, ಅಭಿಮಾನಿಗಳಿಗೂ, ಹಿತೈಷಿಗಳಿಗೂ ಹಾಗೂ ಕರೆ ಮಾಡಿ ಬೆಂಬಲ, ಮನೋಸ್ಥೈರ್ಯ ನೀಡಿರುವ ಎಲ್ಲರಿಗೂ ಧನ್ಯವಾದಗಳು. ಭಾರತ ಮಾತೆಗೆ ಜಯವಾಗಲಿ… ಎಂದು ಟ್ವೀಟ್ ಮಾಡಿದ್ದಾರೆ.