ವಿಜಯಪುರ: ಬಿಎಸ್‍ವೈ (B.S.Yediyurappa) ಎಂದರೆ ಬಿ ಫಾರ್ ಭೀಮಣ್ಣಾ ಖಂಡ್ರೆ, ಎಸ್ ಫಾರ್ ಶಾಮನೂರು ಶಿವಶಂಕ್ರಪ್ಪಾ, ವೈ ಫಾರ್ ಯಡಿಯೂರಪ್ಪ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರಶೈವ ಮಹಾಸಭಾ ಮೂರೇ ಕುಟುಂಬದ ಜನರ ಕೈಯಲ್ಲಿದೆ. ಇವರು ಇವರ ಮಕ್ಕಳು, ಮೊಮ್ಮಕ್ಕಳು, ಹೆಂಡತಿಯರು, ಸೊಸೆಯಂದಿರೆ ಶಾಸಕ, ಸಂಸದರು ಆಗಬೇಕು. ಉಳಿದ ಲಿಂಗಾಯತರು ಇವರ ಮನೆಯಲ್ಲಿ ಈರುಳ್ಳಿ ಹೆಚ್ಚುವ ಕೆಲಸ ಮಾಡಬೇಕಾಗಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ (Shivanand Patil) ಹಗರಣದ ವಿಚಾರವಾಗಿ, ಸಂಬಂಧಪಟ್ಟ ಇಲಾಖೆಯ ಕಮೀಷನರ್ ಬಳಿ ಮಾಹಿತಿ ಕೇಳಿದ್ದೇನೆ. ಶಿವಾನಂದ ಪಾಟೀಲ್ ಏನು ಆದಿಲ್ ಶಾಹಿನಾ? ಟಿಪ್ಪು ಸುಲ್ತಾನಾ? ನಾನು ಎಂಎಲ್‍ಎ ಇದ್ದೇನೆ. ನನಗೆ ಎಲ್ಲಾ ದಾಖಲೆ ನೀಡಬೇಕು. 24 ತಾಸಿನಲ್ಲಿ ದಾಖಲಾತಿ ನೀಡಬೇಕಿತ್ತು, ನೀಡಿಲ್ಲ. ಕಮೀಷನರ್ ಹಾಗೂ ಸಚಿವರ ವಿರುದ್ಧ ಹಕ್ಕು ಚ್ಯುತಿ ಮಂಡನೆ ಮಾಡುತ್ತೇನೆ. ಅಧಿಕಾರಿಗಳನ್ನು ಹೆದರಿಸುತ್ತಾ ಓಡಾಡುತ್ತಿದ್ದಾನೆ. ಸಂಪೂರ್ಣ ಹಗರಣ ತಗೆಯುತ್ತೇನೆ. ಭಾರೀ ಪ್ರಾಮಾಣಿಕ ಎಂದು ಭಾಷಣ ಮಾಡ್ತಾನೆ ಎಂದು ಅವರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.
ವಕ್ಫ್‌ನ ಆಸ್ತಿ ವಿಚಾರವಾಗಿ, ಆ ಆಸ್ತಿಯನ್ನು ಜಮೀರ್‌ನ ಅಪ್ಪ ಮಾಡಿದ್ದಾನಾ? ಈಗಾಗಲೇ ಅವರಿಗೆ ಪಾಕಿಸ್ತಾನವನ್ನು ಒಡೆದು ಕೊಟ್ಟಾಗಿದೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ನೆಹರು ಮಾಡಿದ ದೊಡ್ಡ ಅನಾಹುತ ಎಂದರೆ ವಕ್ಫ್ ಅನ್ನೊದು. ಕರಾಳ ಒಂದು ಕಾನೂನು ತಗೆದುಕೊಂಡು ಬಂದು ನಮ್ಮ ದೇಶದ 12 ಲಕ್ಷ ಎಕರೆಗಿಂತಲೂ ಹೆಚ್ಚು ವಕ್ಫ್‌ಗೆ ಕೊಟ್ಟಿದ್ದಾರೆ. ಹಿಂದೂಗಳ ಜಮೀನು ಕೂಡ ವಕ್ಫ್‌ಗೆ ಕೊಟ್ಟಿದ್ದಾರೆ. ದಲಿತರು ಕಟ್ಟುವಂತಹ ಮನೆಗಳ ಮೇಲೂ ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಕಂದಾಯ ಇಲಾಖೆಗೆ ವಕ್ಫ್ ಆಸ್ತಿ ಹಸ್ತಾಂತರ ಮಾಡಬೇಕು. ಗಾಂಧಿ ಮತ್ತು ನೆಹರು ಪಾಕಿಸ್ತಾನ ಎಂಬ ಕರಾಳ ದೇಶವನ್ನು ಮಾಡಿಕೊಟ್ಟಿದ್ದಾರೆ. ಅಲ್ಲಿ ಬೇಕಾದ್ರೆ ವಕ್ಫ್ ಮಾಡಿಕೊಳ್ಳಲಿ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.