ಬೆಂಗಳೂರು: ಧಾರವಾಡ ಜಿ.ಪಂ. ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಶಾಸಕ ವಿನಯ್ ಕುಲಕರ್ಣಿಯವರು (Vinay Kulkarni) ಸಲ್ಲಿಸಿದ್ದ ಜಾಮೀನು (Bail) ಅರ್ಜಿಯನ್ನು ಹೈಕೋರ್ಟ್ (High Court) ವಜಾಗೊಳಿಸಿದೆ.
ಪ್ರಕರಣ ಕೊನೆ ಹಂತದಲ್ಲಿದೆ ಎಂದು ಶಾಸಕ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಜಾಮೀನು ರದ್ದು ಮಾಡಿದೆ. ಹೀಗಾಗಿ ಸುಪ್ರೀಂ ಕೋರ್ಟ್‍ಗೆ ಅರ್ಜಿ ಸಲ್ಲಿಸುವುದು ಸೂಕ್ತ ಎಂದು ನ್ಯಾ.ಸುನಿಲ್ ದತ್ತ ಯಾದವ್ ಇದ್ದ ಏಕಸದಸ್ಯ ಪೀಠ ಅಭಿಪ್ರಾಯ ವ್ಯಕ್ತಪಡಿಸಿದೆ.
ಜ.9 ರಂದು ಅರ್ಜಿ ವಿಚಾರಣೆ ವೇಳೆ ವಿನಯ್ ಕುಲಕರ್ಣಿ ಪರವಾಗಿ ವಾದಿಸಿದ್ದ ಹಿರಿಯ ವಕೀಲ ಸಿ.ವಿ ನಾಗೇಶ್, ಕೊಲೆ ಪ್ರಕರಣದಲ್ಲಿ ಅರ್ಜಿದಾರರ ಯಾವುದೇ ಪಾತ್ರವಿಲ್ಲ. ಕೊಲೆಯಾದ ಸ್ಥಳದಲ್ಲಿಯೂ ಹಾಜರಿರಲಿಲ್ಲ. ಪ್ರಕರಣದ ಇತರೆ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಜಾಮೀನು ಷರತ್ತುಗಳನ್ನ ಉಲ್ಲಂಘಿಸುವುದಕ್ಕೆ ಸಾಕಷ್ಟು ವ್ಯತ್ಯಾಸವಿದೆ ಎಂದು ವಾದಿಸಿದ್ದರು.
ಸಿಬಿಐ ಪರವಾಗಿ ವಾದ ಮಂಡಿಸಿದ್ದ ವಕೀಲ ಪ್ರಸನ್ನ ಕುಮಾರ್, ಜಾಮೀನು ವೇಳೆ ಎಲ್ಲ ಷರತ್ತಿಗೆ ಒಪ್ಪಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಈಗ ಅವುಗಳನ್ನ ಉಲ್ಲಂಘಿಸಿದ್ದಾರೆ. ಷರತ್ತು ಉಲ್ಲಂಘನೆಯಾಗಿದ್ದು, ಜಾಮೀನು ಪಡೆಯುವುದಕ್ಕೆ ಅರ್ಹರಲ್ಲ ಎಂದು ವಾದಿಸಿದ್ದರು. ವಾದ ಆಲಿಸಿದ್ದ ಹೈಕೋರ್ಟ್ ಆದೇಶವನ್ನು ಇಂದು (ಜ.27) ಪ್ರಕಟಿಸಿದೆ.

