ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣವನ್ನ (Dharmasthala Case) ಎಸ್‌ಐಟಿ ತನಿಖೆಗೆ ಕೊಟ್ಟ ಸರ್ಕಾರದ ವಿರುದ್ಧ ಬಿಜೆಪಿ ಮುಗಿಬಿದ್ದಿದೆ. ಪೊಲೀಸರ ವಿಚಾರಣೆ, ಸ್ಥಳ ಪರಿಶೋಧನೆಯಲ್ಲಿ ಅನಾಮಿಕ ಮಾಡಿದ ಆರೋಪ ಸಾಬೀತಾದಂತಿಲ್ಲ. ʻಧರ್ಮಸ್ಥಳ ಕ್ಷೇತ್ರದ ಜೊತೆ ನಾವುʼ ಎಂಬ ಘೋಷವಾಕ್ಯದಡಿ ಈಗಾಗಲೇ ಸಾವಿರಾರು ಜನ ಧರ್ಮಸ್ಥಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಇಂದು ಶಾಸಕರ ಜೊತೆ ಬಂದು ದೇವಸ್ಥಾನದಲ್ಲಿ ಸಂಕಲ್ಪ ಮಾಡಲಿದ್ದಾರೆ.
ಧರ್ಮಸ್ಥಳ (Dharmasthala) ಗ್ರಾಮದಲ್ಲಿ ನೂರಾರು ಶವ ಹೂತಿದ್ದೇನೆ ಎಂಬ ಅನಾಮಿಕನ ಹೇಳಿಕೆ ರಾದ್ಧಾಂತ ಸೃಷ್ಟಿ ಮಾಡಿದೆ. ಧರ್ಮಸ್ಥಳ ಕ್ಷೇತ್ರದ ಭಕ್ತರಿಗೂ ಕ್ಷೇತ್ರದಲ್ಲಿ ಏನಾಗುತ್ತಿದೆ ಎಂಬ ಸಂಶಯ ಕಾಡಿತ್ತು. ಇದಾಗಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ಮೂಲಕ ವಿಚಾರಣೆ, ಶೋಧನೆ ನಡೆಸಿದೆ. ಆದ್ರೆ ಶೋಧಕಾರ್ಯದಲ್ಲಿ ಯಾವುದೇ ಕುರುಹುಗಳು ಸಿಗದಿರುವ ಹಿನ್ನೆಲೆ ಇದೀಗ ಬಿಜೆಪಿ (BJP) ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಅಸ್ತ್ರ ಪ್ರಯೋಗಿಸಿದೆ. ಇದನ್ನೂ ಓದಿ: ಬುರುಡೆ ಸಿಕ್ಕಿದ್ದೆಲ್ಲಿ? ತಂದಿದ್ದೆಲ್ಲಿ? – ಅನಾಮಿಕ ದೂರುದಾರನ ತೀವ್ರ ವಿಚಾರಣೆ
ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ನೇತೃತ್ವದಲ್ಲಿ ಬೆಂಗಳೂರಿನಿಂದ ಹೊರಟು ವಾಹನ ರ‍್ಯಾಲಿ ಧರ್ಮಸ್ಥಳ ದೇವಸ್ಥಾನ ತಲುಪಿದೆ. ನೂರಾರು ವಾಹನಗಳಲ್ಲಿ ಸಾವಿರಾರು ಜನ ಧರ್ಮಸ್ಥಳಕ್ಕೆ ತಲುಪಿದ್ದಾರೆ. ಧರ್ಮಸ್ಥಳ ಜೊತೆ ನಾವು ಎಂಬ ಘೋಷವಾಕ್ಯದಡಿಯಲ್ಲಿ ದೇವರ ದರ್ಶನ ಮಾಡಿ ಧರ್ಮಸ್ಥಳ ಜೊತೆ ನಾವು ಎಂಬ ಸಂದೇಶ ರವಾನಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಉಡುಪಿ ದಕ್ಷಿಣ ಕನ್ನಡ ಶಿವಮೊಗ್ಗ ಚಿಕ್ಕಮಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ದೇವರ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ: ಅಣುಬಾಂಬ್ ಪರೀಕ್ಷೆಯನ್ನು ವಿಶ್ವವೇ ವಿರೋಧಿಸಿದಾಗ ಇನ್ನೂ 2 ಬಾಂಬ್ ಪರೀಕ್ಷೆ ಮಾಡಿ ಅಂದವರು ಅಟಲ್‌ಜೀ: ಬಿಎಲ್ ಸಂತೋಷ್
ರಾಜ್ಯದ ಪ್ರತಿ ತಾಲೂಕುಗಳಲ್ಲಿ ಈ ಬಗ್ಗೆ ಪ್ರತಿಭಟನೆ ಸಭೆ ಘೋಷಣೆಯಾಗಿದೆ. ಅಭಿಯಾನದ ಸಮಾರೋಪ ಧರ್ಮಸ್ಥಳದಲ್ಲಿ ನಡೆಯಲಿದೆ. ಒಟ್ಟಿನಲ್ಲಿ ಯಾರೋ ಅನಾಮಿಕ ಬಂದು ದೂರು ನೀಡಿದಾಕ್ಷಣ ಎಸ್‌ಐಟಿ ಮಾಡಿ ತನಿಖೆ ನಡೆಸಿದ ರಾಜ್ಯ ಸರ್ಕಾರಕ್ಕೆ ಇದೀಗ ಬಿಸಿ ತುಪ್ಪವಾಗಿದೆ. ಇದನ್ನೂ ಓದಿ: ಬಾಲಿವುಡ್ ಸಿನಿಮಾ ಉಲ್ಲೇಖಿಸಿ ಮತಗಳವು ಬಗ್ಗೆ ರಾಹುಲ್ ಗಾಂಧಿ ಪಂಚ್