ಚಿಕ್ಕೋಡಿ/ಬೆಳಗಾವಿ: ಯಡಿಯೂರಪ್ಪನವರಿಗೆ ಪರ್ಯಾಯ ನಾಯಕರಾಗುವ ಯೋಗ್ಯತೆ, ಸಾಮರ್ಥ್ಯ ಡಿಸಿಎಂ ಸೇರಿದಂತೆ ಯಾರಿಗೂ ಇಲ್ಲ ಎಂದು ಬಿಜೆಪಿ ಶಾಸಕ ಉಮೇಶ್ ಕತ್ತಿ ಪರೋಕ್ಷವಾಗಿ ಡಿಸಿಎಂ ಲಕ್ಷ್ಮಣ್ ಸವದಿಯವರಿಗೆ ಟಾಂಗ್ ನೀಡಿದ್ದಾರೆ.
ಜಿಲ್ಲೆಯ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಯಾರೇ ಡಿಸಿಎಂ ಆದರೂ ಸಹ ಬಿಎಸ್‍ವೈಗೆ ಪರ್ಯಾಯ ನಾಯಕರಾಗಲು ಸಾಧ್ಯವಿಲ್ಲ. ಡಿಸಿಎಂ ಸಾಂವಿಧಾನಿಕ ಹುದ್ದೆ ಅಲ್ಲ, ಆದರೆ ಆಡಳಿತಕ್ಕೆ ಅನುಕೂಲವಾಗಲೆಂದು ಮಾಡಿದ್ದಾರೆ. ಬಿಎಸ್‍ವೈ ಸೈಕಲ್ ಮೇಲೆ ಪ್ರಚಾರ ಮಾಡಿ ಹೋರಾಟ ಮಾಡಿ ಪಕ್ಷ ಕಟ್ಟಿದ್ದಾರೆ. ಹೀಗಿರುವಾಗ ಅವರಿಗೆ ಪರ್ಯಾಯ ನಾಯಕರಾಗಲು ಮೂವರು ಡಿಸಿಎಂಗಳಿಗೂ ಸೇರಿದಂತೆ ಯಾರಿಗೂ ಸಾಧ್ಯವಿಲ್ಲ. ಪರ್ಯಾಯ ನಾಯಕರನ್ನು ಬೆಳೆಸುವ ಕುರಿತು ಪಕ್ಷ ವಿಚಾರ ಮಾಡಬಾರದು ಎಂದರು.
Advertisement
Advertisement
ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಯಾರನ್ನೂ ಬೆಳೆಸುವ ವಿಚಾರವನ್ನು ಯಾರೂ ಮಾಡಬಾರದು. ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಅಶ್ವತ್ಥ ನಾರಾಯಣ ಅವರಿಗೆ ಯಡಿಯೂರಪ್ಪ ಪರ್ಯಾಯ ನಾಯಕರಾಗುವಂಥ ಯೋಗ್ಯತೆ, ಕೆಪ್ಯಾಸಿಟಿ ಇಲ್ಲ. ಡಿಸಿಎಂ ಹುದ್ದೆ ಕೊಟ್ಟಿರಬಹದು ಆದರೆ ಅದು ಸಾಂವಿಧಾನಿಕ ಹುದ್ದೆ ಅಲ್ಲ. ಉಪ ಮುಖ್ಯಮಂತ್ರಿ ಆದವರೆಲ್ಲ ದೊಡ್ಡವರಾಗಲು ಬರುವುದಿಲ್ಲ ಎಂದು ಹೇಳಿದರು.
Advertisement
ಅನರ್ಹರಿಗೆ ಟಿಕೆಟ್ ನೀಡುವ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಆದರೆ ಸೋತಿರುವ ರಾಜು ಕಾಗೆ, ಅಶೋಕ ಪೂಜಾರಿ, ಲಕ್ಷ್ಮಣ ಸವದಿ ಇಂದಿಗೂ ನಮ್ಮ ಅಭ್ಯರ್ಥಿಗಳು. ಹೈಕಮಾಂಡ್ ತೀರ್ಮಾನಕ್ಕೆ ನಾನು ಬದ್ಧ. ಬಿಜೆಪಿ ಕಾರ್ಯಕರ್ತರಾಗಿ ದುಡಿಯಬೇಕು. ಅನರ್ಹರು ಅವಶ್ಯಕತೆ ಇಲ್ಲ ಎನ್ನುವ ಲಕ್ಷ್ಮಣ ಸವದಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಅನರ್ಹರು ರಾಜೀನಾಮೆ ಕೊಡದೇ ಇದ್ದರೆ ಲಕ್ಷ್ಮಣ ಸವದಿ ಡಿಸಿಎಂ ಆಗುತ್ತಿರಲಿಲ್ಲ. ಬಿಎಸ್‍ವೈ ಸಿಎಂ ಆಗುತ್ತಿರಲಿಲ್ಲ. ಇದನ್ನು ಸವದಿ ಅರ್ಥ ಮಾಡಿಕೊಳ್ಳಬೇಕು ಎಂದರು.
Advertisement
ಸವದಿ ಅವರಿಗೆ ಡಿಸಿಎಂ ಸ್ಥಾನ ತಪ್ಪುವ ಕುರಿತು ಪ್ರತಿಕ್ರಿಯಿಸಿದ ಅವರು, ಅದು ಹೈ ಕಮಾಂಡ್ ತೀರ್ಮಾನ. ಶಾಸಕರಲ್ಲದವರನ್ನು ಡಿಸಿಎಂ ಮಾಡಿದ ಪಕ್ಷ ಬಿಜೆಪಿ. ಪಕ್ಷದ ತೀರ್ಮಾನದ ಮುಂದೆ ನಾನು ಮಾತನಾಡಲು ಸಾಧ್ಯವಿಲ್ಲ. ಅತಿವೃಷ್ಟಿ ಮುಂಬರುವ ಉಪ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಯಡಿಯೂರಪ್ಪನವರ ಸರ್ಕಾರ ಸಂತ್ರಸ್ತರ ಪರವಾಗಿ ಒಳ್ಳೆಯ ಕಾರ್ಯ ಮಾಡಿದ್ದಾರೆ. ಅತಿವೃಷ್ಟಿಯ ಪರಿಣಾಮ ರಾಜ್ಯ ಬಿಜೆಪಿಗೂ ತಟ್ಟಲಿದೆ. ಆದರೆ ಸರ್ಕಾರ ಸಂತ್ರಸ್ತರ ಪರವಾಗಿ ಕೆಲಸ ಮಾಡಿದೆ ಎಂದು ತಿಳಿಸಿದರು.