ಮಂಗಳೂರು: ಸಾಮಾನ್ಯವಾಗಿ ಯಾರೇ ಆಗಲಿ, ಅನ್ಯ ಧರ್ಮೀಯರು ನಡೆಸುವ ಆರಾಧನೆಗಳಿಗೆ ಪ್ರೋತ್ಸಾಹ ಕೊಡುವುದು ಕಡಿಮೆ. ಅದರಲ್ಲೂ ತಮ್ಮ ಜಮೀನಿನಲ್ಲಿ ಇತರೇ ವ್ಯಕ್ತಿಗಳು ಬಂದು ಆರಾಧನೆ ಇತ್ಯಾದಿಗಳನ್ನು ಮಾಡೋದಿದ್ದರೆ ಬಿಟ್ಟು ಕೊಡಲ್ಲ. ಅಂತಹದರಲ್ಲಿ ಮಂಗಳೂರಿನ ಶಾಸಕ, ಮಾಜಿ ಸಚಿವ ಯು.ಟಿ ಖಾದರ್ ಮಾದರಿ ಕೆಲಸ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಪುಣಚ ಮೂಲದ ಯು.ಟಿ. ಖಾದರ್ ಅವರಿಗೆ ಸೇರಿದ ಜಮೀನಿನಲ್ಲಿ ಹಿಂದಿನ ಕಾಲದಲ್ಲಿ ನಾಗನ ಆರಾಧನೆ ನಡೆಯುತ್ತಿತ್ತು. ಕಾಲ ಕ್ರಮೇಣ ಈ ಜಮೀನು ಯು.ಟಿ ಖಾದರ್ ಅಜ್ಜ ಮಹಮ್ಮದ್ ಹಾಜಿಗೆ ಸೇರಿ ಹೋಗಿತ್ತು. ಆದರೆ ಸದ್ರಿ ಜಮೀನು ಪೂರ್ವದಲ್ಲಿ ವಿಟ್ಲದ ಈಶ್ವರಯ್ಯ ದಳವಾಯಿ ಕುಟುಂಬಕ್ಕೆ ಸೇರಿದ್ದು ಬಳಿಕ ಕುಟುಂಬಸ್ಥರು ಚದುರಿ ಹೋಗಿದ್ದರು.
ಹತ್ತು ವರ್ಷಗಳ ಹಿಂದೆ ದಳವಾಯಿ ಕುಟುಂಬದವರು ಅಷ್ಟಮಂಗಲ ಪ್ರಶ್ನೆಯಿಟ್ಟು ತಮ್ಮ ಜಾಗ ಮುಸ್ಲಿಂರ ಬಳಿ ಇರುವುದನ್ನು ಪತ್ತೆ ಮಾಡಿ, ನಾಗನ ಆರಾಧನೆಗಾಗಿ ಜಾಗ ಖರೀದಿಗೆ ಮುಂದಾಗಿದ್ದಾರೆ. ಕುಟುಂಬದ ಪ್ರಮುಖರಾದ ರವಿರಾಜ್ ದಳವಾಯಿ, ಬಳಿಕ ಶಾಸಕ ಯು.ಟಿ ಖಾದರ್ ಅವರಲ್ಲಿ ವಿಷಯ ಪ್ರಸ್ತಾಪಿಸಿದಾಗ, ಶಾಸಕರು ಉಚಿತವಾಗಿ ಜಮೀನು ಕೊಡಲು ಒಪ್ಪಿಕೊಂಡಿದ್ದಾರೆ.
ರವಿರಾಜ್ ಹತ್ತು ಸೆಂಟ್ಸ್ (1 ಸೆಂಟ್ ಎಂದರೆ 0.01 ಎಕ್ಕರೆ ಸಮ) ಜಾಗ ಕೇಳಿದರೆ ಶಾಸಕರು 20 ಸೆಂಟ್ಸ್ ಜಾಗವನ್ನು ಕೊಟ್ಟು ಔದಾರ್ಯ ಮೆರೆದಿದ್ದಾರೆ. ಈ ಘಟನೆ 2010ರಲ್ಲಿ ನಡೆದಿದ್ದರೂ, ಆ ಬಳಿಕ ಪ್ರತಿ ವರ್ಷ ಪುಣಚದಲ್ಲಿ ಸಾರ್ವಜನಿಕರು ಸೇರಿ ಅದ್ಧೂರಿಯಾಗಿ ನಾಗರ ಪಂಚಮಿ ಆಚರಿಸುತ್ತಾರೆ. ಮುಸ್ಲಿಂರಿಗೆ ಸೇರಿದ 12 ಎಕರೆ ಜಮೀನಿನ ಮಧ್ಯೆ ನಾಗಾರಾಧನೆ ನಡೆಯುವುದು ಧರ್ಮ ಸಾಮರಸ್ಯಕ್ಕೊಂದು ಮಾದರಿ ಎನಿಸುವಂತಾಗಿದೆ.