ಚಿಕ್ಕಬಳ್ಳಾಪುರ: ರಾಜಕೀಯವಾಗಿ ಪರಸ್ಪರ ಕಡು ವೈರಿಗಳಾಗಿರುವ ಕೃಷಿ ಸಚಿವ ಶಿವಶಂಕರರೆಡ್ಡಿ ಹಾಗೂ ಶಾಸಕ ಸುಧಾಕರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕೇಂಪೇಗೌಡ ಜಯಂತಿ ಆಚರಣೆಯಲ್ಲಿ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಹಾಗೂ ಗೌರಿಬಿದನೂರು ಶಾಸಕ ಹಾಗೂ ಕೃಷಿ ಸಚಿವರಾಗಿರುವ ಎನ್.ಎಚ್. ಶಿವಶಂಕರರೆಡ್ಡಿ, ಭಾಗವಹಿಸಿದ್ದರು. ವೇದಿಕೆಗೆ ಮೊದಲ ಆಗಮಿಸಿ ಆಸನದಲ್ಲಿದ್ದ ಶಾಸಕ ಸುಧಾಕರ್, ಸಚಿವ ಶಿವಶಂಕರರೆಡ್ಡಿ ವೇದಿಕೆಗೆ ಆಗಮಿಸುತ್ತಿದ್ದಂತೆ ಎದ್ದು ನಿಂತು ಹಸ್ತಲಾಘವ ಮಾಡಿಕೊಳ್ಳುವ ಮೂಲಕ ಬರ ಮಾಡಿಕೊಂಡರು.
Advertisement
ಇನ್ನೂ ವಿಶೇಷ ಅಂದರೆ ಶಾಸಕ ಸುಧಾಕರ್ ಇಂದು ತಮ್ಮ 45 ನೇ ವರ್ಷದ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳುತ್ತಿದ್ದು, ಜಿಲ್ಲಾ ಪಂಚಾಯತ್ ಅಧ್ಯಕ್ಷ ಮಂಜುನಾಥ್ ನೀಡಿದ ಸುಳಿವಿನ ಮೇರೆಗೆ ಸುಧಾಕರ್ ಗೆ ಶಿವಶಂಕರರೆಡ್ಡಿ ಸರಳವಾಗಿ ಹುಟ್ಟು ಹಬ್ಬದ ಶುಭಾಶಯ ಕೂಡ ಕೋರಿದ್ದಾರೆ. ಇದೆಲ್ಲದರ ನಡುವೆ ಮೊದಲು ಭಾಷಣ ಆರಂಭಿಸಿದ ಸಚಿವ ಶಿವಶಂಕರರೆಡ್ಡಿ, ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಆಧಿಕಾರಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಜಿಲ್ಲೆಯ ಅಭಿವೃದ್ದಿ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನ ಬದಿಗೊತ್ತಿ ಅಭಿವೃದ್ಧಿ ಪರ ಕೆಲಸ ಮಾಡೋಣ ಅಂತ ಶಾಸಕ ಸುಧಾಕರ್ ಗೆ ಪರೋಕ್ಷವಾಗಿ ಕಿವಿಮಾತು ಹೇಳಿದರು.
Advertisement
ಇನ್ನೂ ಇದಕ್ಕೆ ಪೂರಕವಾಗಿ ಸ್ಪಂದಿಸಿದ ಶಾಸಕ ಸುಧಾಕರ್ ಕೂಡ, ಭಾಷಣದ ವೇಳೆ ಸಚಿವರಾಗಿ ಆಯ್ಕೆಯಾದ ಶಿವಶಂಕರರೆಡ್ಡಿಯವರಿಗೆ ಅಭಿನಂದನೆಗಳನ್ನ ಸಲ್ಲಸಿದ್ದಲ್ಲದೇ, ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ಸಚಿವರಿಗೆ ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದರು.
Advertisement
ಈ ಹಿಂದೆ ಶಾಸಕ ಸುಧಾಕರ್ ರಾಜಕೀಯವಾಗಿ ಸಚಿವ ಶಿವಶಂಕರರೆಡ್ಡಿ ಜೊತೆ ವೇದಿಕೆ ಹಂಚಿಕೊಳ್ಳಲ್ಲ ಅಂತ ಬಹಿರಂಗವಾಗಿಯೇ ಹೇಳಿದ್ದರು. ಅಸಲಿಗೆ ಶಾಸಕ ಸುಧಾಕರ್ ಹಾಗೂ ಸಚಿವ ಶಿವಶಂಕರರೆಡ್ಡಿ ನಡುವಿನ ಶೀತಲ ಸಮರ ಹಾಗೂ ಮುಸುಕಿನ ಗುದ್ದಾಟ ಕೇವಲ ಮೇಲ್ನೋಟಕ್ಕೆ ತಣಿಸಿದ್ದು, ಹೇಳಿದ ಮಾತುಗಳಂತೆ ಮುಂದಿನ ದಿನಗಳಲ್ಲಿ ಹಾಗೆಯೇ ನಡೆದುಕೊಳ್ಳುತ್ತಾರಾ ಕಾದು ನೋಡಬೇಕಿದೆ.
Advertisement