ಸಚಿವ ಸ್ಥಾನವೂ ಇಲ್ಲ, ಈಗ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪದವಿಗೂ ಕುತ್ತು

Public TV
1 Min Read
MLA SUDHAKAR

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯದೇ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯಲು ಮುಂದಾಗಿದ್ದ ಚಿಕ್ಕಬಳ್ಳಾಪುರ ಶಾಸಕ ಸುಧಾಕರ್ ಗೆ ಸಿಕ್ಕಿದ್ದ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಕುತ್ತು ಎದುರಾಗಿದೆ.

ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್‍ಜಿಟಿ) ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಪರಿಸರ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವ ವ್ಯಕ್ತಿ ಪರಿಸರ ಬಗ್ಗೆ ವಿಶೇಷ ಜ್ಞಾನ ಹೊಂದಿರಬೇಕು. ಅಲ್ಲದೇ ಪರಿಸರ ವಿಜ್ಞಾನದ ವಿಷಯದಲ್ಲಿ ಸ್ನಾತಕೋತ್ತರ ಅಥವಾ ಎಂಜಿನಿಯರಿಂಗ್ ಪದವಿ ಪಡೆದಿರಬೇಕು. ಇದಲ್ಲದೇ ಮಾಲಿನ್ಯ ಪ್ರಮಾಣ ತಗ್ಗಿಸಲು ಅನುಭವ ಹಾಗೂ ಪರಿಸರ ಜ್ಞಾನ ಹೊಂದಿರಬೇಕು ಎನ್ನುವ ನಿಯಮವಿದೆ.

sudhakar

ಪರಿಸರ ನಿಯಂತ್ರಣ ಅಧ್ಯಕ್ಷ ಸ್ಥಾನ ರಾಜಕೀಯ ಹುದ್ದೆಯಲ್ಲ. ಪ್ರತಿಭೆಯನ್ನು ಆಧರಿಸಿ ನೇಮಕ ಮಾಡಬೇಕು. ಅಲ್ಲದೇ ತಜ್ಞರಿಂದ ಅರ್ಜಿ ಆಹ್ವಾನಿಸಿ, ಸಂದರ್ಶನ ಮಾಡಿ ನೇಮಕ ಮಾಡಬೇಕಾಗುತ್ತದೆ. ಆದರೆ ಇದ್ಯಾವುದನ್ನು ಪಾಲಿಸದೇ ಸರ್ಕಾರ ಸುಧಾಕರ್ ಅವರನ್ನು ನೇಮಕ ಮಾಡಲು ಮುಂದಾಗಿದೆ. ಹೀಗಾಗಿ ಈ ಆದೇಶಕ್ಕೆ ಸಹಿ ಮಾಡಲು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹಿಂದೇಟು ಹಾಕಿದ್ದಾರೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿ ಸಹಿಯನ್ನು ಹಾಕಿದರೆ, ಜೈಲಿಗೆ ಹೋಗುವ ಭೀತಿ ಅಧಿಕಾರಿಗೆ ಎದುರಾಗುತ್ತದೆ ಎಂದು ಹಿರಿಯ ಐಎಎಸ್ ಅಧಿಕಾರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ಪತ್ರ ಬರುವವರೆಗೂ ಸಹಿ ಮಾಡುವುದಿಲ್ಲ. ಅಲ್ಲದೇ ಸುಖಾ-ಸುಮ್ಮನೆ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಸಿಎಂ ಆದೇಶದ ಪ್ರತಿ ಬಂದರೇ ಮಾತ್ರ ಪಾಲಿಸುತ್ತೇನೆ. ಒಂದು ವೇಳೆ ಸಹಿ ಮಾಡಿದರೆ ನಾನು ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ. ಆಗ ನನ್ನ ಬೆಂಬಲಕ್ಕೆ ಯಾರೂ ಬರುವುದಿಲ್ಲವೆಂದು ಹೆಚ್ಚುವರಿ ಮುಖ್ಯಕಾರ್ಯದರ್ಶಿಗಳು ಹೇಳಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಈ ಹುದ್ದೆಗೆ ಅನುಭವ ಇಲ್ಲದ ಸುಧಾಕರ್ ಅವರನ್ನು ನೇಮಕ ಮಾಡಿದರೆ ಕೋರ್ಟ್ ಮೆಟ್ಟಿಲೇರಲು ಸಾಮಾಜಿಕ ಹೋರಾಟಗಾರರು ಸಿದ್ದರಾಗಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *