ಮೈಸೂರು: ಮುಡಾದ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಹಿಂದಿನ ಆಯುಕ್ತ ದಿನೇಶ್ ಕುಮಾರ್ ಅಮಾನತು ಆದೇಶವೇ ಈ ಸರ್ಕಾರಕ್ಕೆ ಸುಸೈಡ್ ನೋಟ್ ಆಗಲಿದೆ ಎಂದು ಶಾಸಕ ಶ್ರೀವತ್ಸ (MLA Srivatsa) ಹೇಳಿದ್ದಾರೆ.
ಮೈಸೂರಿನಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಸರ್ಕಾರದ ಆದೇಶದಲ್ಲೇ ಸಿಎಂ ಪತ್ನಿಗೆ ಕೊಟ್ಟಿರುವ ಸೈಟ್ ಆಕ್ರಮ ಎಂದು ಹೇಳಲಾಗಿದೆ. ಅಧಿಕಾರಿ ಅಮಾನತು ಆದೇಶವನ್ನೆ ಕೋರ್ಟ್‍ಗೆ ಕೊಡ್ತೀವಿ ಎಂದು ಹೇಳಿದ್ದಾರೆ.
ಅಧಿಕಾರಿ ಅಮಾನತು ಮಾತ್ರವಲ್ಲದೇ ಬಂಧನ ಕೂಡ ಆಗಬೇಕಿದೆ ಎಂದು ಅವರು ಈ ವೇಳೆ ಒತ್ತಾಯಿಸಿದ್ದಾರೆ.
ಮುಡಾ ಹಗರಣ (MUDA Case) ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಆಯುಕ್ತ ಜಿ.ಟಿ ದಿನೇಶ್‍ಕುಮಾರ್ ಅವರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಮೂಡಾ ಹಗರಣದಲ್ಲಿ ದಿನೇಶ್ ಕುಮಾರ್ ಮೇಲೆ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಅಮಾನತು ಮಾಡಿ ಸರ್ಕಾರ ಆದೇಶಿಸಿದೆ.
ಅವರ ವಿರುದ್ಧ ಕರ್ತವ್ಯ ಲೋಪ ಎಸಗಿರುವುದು ಸಕ್ಷಮ ಪ್ರಾಧಿಕಾರಕ್ಕೆ ಮನವರಿಕೆಯಾಗಿದೆ. ಸದರಿ ಅವರು ಅಧಿಕಾರದಲ್ಲಿ ಮುಂದುವರೆದಲ್ಲಿ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಅವರ ವಿರುದ್ಧ ಇಲಾಖೆಯ ವಿಚಾರಣೆಯನ್ನು ಬಾಕಿಯಿರಿಸಿ ಸೇವೆಯಿಂದ ಅಮಾನತುಗೊಳಿಸಲು ತೀರ್ಮಾನಿಸಿದೆ ಎಂದು ಆದೇಶ ಪ್ರತಿಯಲ್ಲಿ ತಿಳಿಸಲಾಗಿದೆ.