ಬೆಂಗಳೂರು: ಸಮ್ಮಿಶ್ರ ಸರ್ಕಾರ ಉರುಳಿಸಲು ಬಿಜೆಪಿ ‘ಆಪರೇಷನ್ ಕಮಲ’ಕ್ಕೆ ಮುಂದಾಗುತ್ತಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆರೋಪಿಸುತ್ತಿದೆ. ಆಪರೇಷನ್ ಕಮಲದ ಉಸ್ತುವಾರಿಯನ್ನು ತೆಗೆದುಕೊಂಡಿರುವ ಮಾಸ್ಟರ್ ಮೈಂಡ್ ಮಾತ್ರ ಯಾರಿಗೂ ಕಾಣಿಸಿಕೊಳ್ಳದೇ ಅಜ್ಞಾತ ಸ್ಥಳದಲ್ಲಿಯೇ ಉಳಿದುಕೊಂಡು ಕಾರ್ಯತಂತ್ರ ರಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಹೌದು, ಆಪರೇಷನ್ ಕಮಲ ಶಾಸಕ ಶ್ರೀರಾಮುಲು ನೇತೃತ್ವದಲ್ಲಿ ನಡೆಯುತ್ತಿದೆ ಅಂತಾ ಹೇಳಲಾಗುತ್ತಿದೆ. ಆದ್ರೆ ಕಳೆದ ಒಂದು ವಾರದಿಂದ ಶ್ರೀರಾಮುಲು ಬಹಿರಂಗವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಆಪರೇಷನ್ ಕಮಲ ಯಶಸ್ವಿ ಆಗುವರೆಗೂ ಯಾರಿಗೂ ಕಾಣಿಸಿಕೊಳ್ಳದಂತೆ ಮತ್ತು ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದಂತೆ ಹೈಕಮಾಂಡ್ ಶ್ರೀರಾಮುಲು ಅವರಿಗೆ ಸೂಚಿಸಿದೆಯಂತೆ. ಈ ಹಿನ್ನೆಲೆಯಲ್ಲಿ ಶ್ರೀರಾಮುಲು ಸದಾಶಿವನಗರದ ನಿವಾಸಕ್ಕೂ ಬಾರದೇ ಅಜ್ಞಾತವಾಸದಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಎಲ್ಲಿದ್ದಾರೆ ಶ್ರೀರಾಮುಲು?:
ಶ್ರೀರಾಮುಲು ಬೆಂಗಳೂರಿನ ನಿವಾಸದಲ್ಲಿಯೂ ಇಲ್ಲ. ಬಳ್ಳಾರಿ, ಮೊಣಕಾಲ್ಮೂರು ಕ್ಷೇತ್ರದಲ್ಲಿಯೂ ಉಳಿದುಕೊಂಡಿಲ್ಲ. ಬದಲಾಗಿ ಬೆಂಗಳೂರಿನ ಸಾದಹಳ್ಳಿ ಗೇಟ್ ಸಮೀಪದ ವಿಲ್ಲಾದಲ್ಲಿ ಉಳಿದುಕೊಂಡಿರುವ ಶ್ರೀರಾಮುಲು ಆಪರೇಷನ್ ಕಮಲದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರಂತೆ. ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ನೀಡೋದಾದ್ರೆ ಆಪರೇಷನ್ ಕಮಲದ ಖರ್ಚನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ಗಣಿ ಧಣಿ ಜನಾರ್ದನ ರೆಡ್ಡಿ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಶ್ರೀರಾಮುಲು ವಿದೇಶದಲ್ಲಿರುವ ಕಾಂಗ್ರೆಸ್ ಮಾಜಿ ಸಚಿವ ಸಂತೋಷ್ ಲಾಡ್ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದು ಬಳ್ಳಾರಿ ಜಿಲ್ಲೆಯ 5 ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಅತ್ತ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv