ಬಳ್ಳಾರಿ: ರಾಜ್ಯದ ಜನರು ಮೈತ್ರಿ ಸರ್ಕಾರವನ್ನು ತಿರಸ್ಕಾರ ಮಾಡಿದ್ದು, ನೈತಿಕತೆ ಇದ್ದರೆ ಮೈತ್ರಿ ನಾಯಕರು ರಾಜೀನಾಮೆ ನೀಡಬೇಕು. ಸದ್ಯ ಮೈತ್ರಿಗೆ ಪ್ಯಾಚ್ ಅಪ್ ಮಾಡಲು ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಲಾಗುತ್ತಿದೆ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯ ಕಮಲಾಪುರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ನಡೆಸಿ ಮಾತನಾಡಿದ ಅವರು, ಮೋದಿ ಅಲೆಯಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆಲುವು ಪಡೆದಿದ್ದು, ಈಗ ಸ್ಥಳೀಯ ಸಂಸ್ಥೆ ಚುನಾವಣೆಯನ್ನು ಗೆಲ್ಲುತ್ತೇವೆ. ಶೀಘ್ರವೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುತ್ತದೆ. ರಾಜ್ಯದ ಜನರ ಈ ಸರ್ಕಾರ ತಿರಸ್ಕಾರ ಮಾಡಿದ್ದು ಸಿದ್ದರಾಮಯ್ಯಗೆ ಸರ್ಕಾರ ರಚನೆ ಮಾಡುವ, ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಶಕ್ತಿಯೂ ಇಲ್ಲ ಎಂದರು.
ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಮೂರು ಕಾಂಗ್ರೆಸ್ ಮೂರು ಶಾಸಕರಿಗೆ ಸಚಿವ ಸ್ಥಾನ ನೀಡುವ ಯೋಚನೆ ಹೊಂದಿದೆ. ಆದರೆ ಮೈತ್ರಿಗೆ ಪ್ಯಾಚ್ ಅಪ್ ಮಾಡಲು ಕೆಲ ಶಾಸಕರಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನ ನೀಡಲಾಗುತ್ತಿದೆ ಅಷ್ಟೇ. ಇದರಿಂದ ಮೈತ್ರಿಯಲ್ಲಿ ಇನ್ನಷ್ಟು ಅಸಮಾಧಾನ ಉಂಟಾಗಲಿದ್ದು, ಒಡೆದ ಮನೆಯಾದ ಸರ್ಕಾರ ಬಹಳಷ್ಟು ದಿನ ಉಳಿಯುವುದಿಲ್ಲ. ಆದರೆ ಅತೃಪ್ತ ಶಾಸಕರು ನನ್ನ ಸಂಪರ್ಕಕ್ಕೆ ಬಂದಿಲ್ಲ ಎಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರ ಸ್ಥಾಪನೆ ಆಗುವವರೆಗೂ ಕುರುಬ ಸಮುದಾಯ ಸಿದ್ದರಾಮಯ್ಯ ಜೊತೆಗೆ ಇತ್ತು. ಆದರೆ ಅವರು ಮುಖ್ಯಮಂತ್ರಿ ಆದ ಬಳಿಕ ಸಿದ್ದರಾಮಯ್ಯ ಏನು ಎಂಬುವುದು ಅವರಿಗೂ ಗೊತ್ತಾಗಿದೆ. ಕೆಲ ದಿನಗಳಲ್ಲಿ ಕುರುಬ ಸೇರಿದಂತೆ ಹಿಂದುಳಿದ ಸಮುದಾಯಗಳು ಸಿದ್ದರಾಮಯ್ಯ ಕೈಬಿಡಲಿವೆ ಎಂದರು.