ಬಳ್ಳಾರಿ: ರಾಜ್ಯ ಸಮ್ಮಿಶ್ರ ಸರ್ಕಾರ ಬಿಳಿಸುವ ಬಗ್ಗೆ ಯಾರು ಮಾತನಾಡಬಾರದೆಂದು ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಶಾಸಕ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿ ನೂತನ ಸಂಸದ ದೇವೇಂದ್ರಪ್ಪ ಅವರ ಕಚೇರಿ ಉದ್ಘಾಟನೆ ಮಾಡಿ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್ ನಾಯಕರು ಬಿಜೆಪಿ ಶಾಸಕರ ಸಂಪರ್ಕ ಇದೆ ಎಂದು ಹೇಳುತ್ತಿದ್ದಾರೆ. ಧಮ್ ಇದ್ದರೆ ಬಿಜೆಪಿಯ ಯಾವ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆಂದು ಬಹಿರಂಗಪಡಿಸಲಿ ಎಂದು ಅವರು ಸವಾಲು ಎಸೆದರು.
ದೇಶದಲ್ಲಿ ಎಲ್ಲಿಯೂ ಕಾಂಗ್ರೆಸ್ ಇಲ್ಲ. ರಾಜ್ಯದಲ್ಲೂ ಸಹ ಸಮ್ಮಿಶ್ರ ಸರ್ಕಾರವಿದೆ. ಇದೊಂದು ಘಠಬಂಧನವಾದರೂ ಗಟ್ಟಿಯಾಗಿರಲಿ ಇರಲಿ ಎಂದು ವ್ಯಂಗವಾಡಿದರು. ಅಲ್ಲದೇ ನಾವೂ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿಲ್ಲ. ಬದಲಾಗಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಕಚ್ಚಾಟವನ್ನು ನಮ್ಮ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಾವೂ ಯಾವ ಶಾಸಕರನ್ನ ಸೆಳೆಯುವ ಪ್ರಯತ್ನ ಮಾಡುತ್ತಿಲ್ಲ ಎಂದರು.
ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಗ್ರಾಮ ವ್ಯಾಸ್ತವ್ಯ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಗ್ರಾಮ ವ್ಯಾಸ್ತವ್ಯದೊಂದಿಗೆ ಸಿಎಂ ಅವರ ಆರೋಗ್ಯವನ್ನು ಸಹ ಕಾಯ್ದುಕೊಳ್ಳಲಿ ಎಂದರು.
ಸಂಸದ ದೇವೇಂದ್ರಪ್ಪ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಚಾಲನೆ ನೀಡುತ್ತೇವೆ. ಜೊತೆಗೆ ಬಿಜೆಪಿ ರಾಜಾಧ್ಯಕ್ಷ ಬಿಎಸ್ ವೈ ಮುಖ್ಯಮಂತ್ರಿಯಾಗಲಿ ಎಂದು ಎಲ್ಲಾ ದೇವರಲ್ಲಿ ಹರಿಕೆ ಹೊರುವೆ ಎಂದರು.