ಕೋಲಾರ: ಬಯಲು ಸೀಮೆ ಜಿಲ್ಲೆ ನೀರಿನ ದಾಹ ನೀಗಿಸಲು ರಾಜ್ಯ ಸರ್ಕಾರದ ಕೈಗೊಂಡಿದ್ದ ಕೆ.ಸಿ.ವ್ಯಾಲಿ ನೀರಾವರಿ ಯೋಜನೆಯ ಕುರಿತ ಅಪಪ್ರಚಾರವನ್ನ ನಿವಾರಣೆ ಮಾಡಲು ಕೋಲಾರ ಶಾಸಕ ಶ್ರೀನಿವಾಸ್ ಗೌಡ ಸ್ವತಃ ನರಸಾಪುರ ಕೆರೆಯ ನೀರನ್ನು ಕುಡಿದಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನರಲ್ಲಿರುವ ಆತಂಕವನ್ನು ನಿವಾರಣೆ ಮಾಡಲು ಜಿಲ್ಲೆಯ ನರಸಾಪುರದ ಕೆರೆ ನೀರನ್ನು ನಾನೇ ಸ್ವತಃ ಕುಡಿದಿದ್ದೇನೆ. ಅಲ್ಲದೇ ಯೋಜನೆಯನ್ನ ವಿರೋಧಿಸುವವರು ಸುಮ್ಮನೆ ಅಪಪ್ರಚಾರ ನಡೆಸಿದ್ದಾರೆ. ಒಂದೊಮ್ಮೆ ನೀರು ವಿಷಕಾರಿಯಾದರೆ ನಾನೇ ಸಾಯುವುದಾಗಿ ಹೇಳಿದರು.
ಈ ನೀರು ಬಳಕೆ ಮಾಡದಿದ್ದರೆ ನೇರ ತಮಿಳುನಾಡಿಗೆ ಹರಿಯುತ್ತದೆ. ಅಲ್ಲಿನ ಜನ ನೀರನ್ನು ಸಂಸ್ಕರಿಸದೇ ಬಳಸುತ್ತಿದ್ದಾರೆ. ಅಲ್ಲಿ ರೈತರು ಇದೆ ನೀರಿನಿಂದ ಕೃಷಿ ಮಾಡುತ್ತಿದ್ದಾರೆ. ಆದರೆ ನಮ್ಮಲ್ಲಿ ಸಂಸ್ಕರಿಸಿದ ನೀರನ್ನು ಬಳಸಲು ಹಿಂದೆ ಮುಂದೆ ನೋಡಲಾಗುತ್ತಿದೆ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಅಲ್ಲದೇ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಕೆ ಮಾಡಿ ನೀರು ಹರಿಸದಂತೆ ತಡೆಯಾಜ್ಞೆ ತಂದಿರುವ ಕಾರಣ ಕಳೆದ ಒಂದೂವರೆ ತಿಂಗಳಿಂದ ಕೆ.ಸಿ.ವ್ಯಾಲಿ ನೀರನ್ನು ಹರಿಸಲಾಗುತ್ತಿಲ್ಲ. ಅದ್ದರಿಂದ ತಾನು ನೀರನ್ನು ಕುಡಿದಿದ್ದು ನ್ಯಾಯಾಲಯಕ್ಕೂ ಅಫಿಡವಿಟ್ ಸಲ್ಲಿಸುವುದಾಗಿ ಶ್ರೀನಿವಾಸ್ ತಿಳಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬೆಂಗಳೂರು ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ ಜಿಲ್ಲೆಯ 126 ಕೆರೆಗಳಿಗೆ ಹರಿಸುವ 1,400 ಕೋಟಿ ರೂಪಾಯಿಯ ಕೆ.ಸಿ.ವ್ಯಾಲಿ(ಕೋರಮಂಗಲ- ಚಲ್ಲಘಟ್ಟ) ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ಯೋಜನೆ ಜಿಲ್ಲೆಯನ್ನು ತಲುಪುತ್ತಿದ್ದಂತೆ ಜಿಲ್ಲೆಯ ಜನರು ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದರು. ಆದರೆ ಯೋಜನೆ ಒಂದು ಹಂತದಲ್ಲಿ ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನೀರನ್ನು ಸರಿಯಾಗಿ ಸಂಸ್ಕರಿಸದೆ ಹರಿಸಿದ ಪರಿಣಾಮ ಕೆಲವು ನೀರಾವರಿ ಹೋರಾಟಗಾರರು ಕೆ.ಸಿ.ವ್ಯಾಲಿ ನೀರನ್ನು ಮೂರು ಹಂತಗಳಲ್ಲಿ ಶುದ್ಧೀಕರಿಸಿ ಹರಿಸಬೇಕು. ನೀರು ಹರಿಸುವ ಮುನ್ನ ನೀರಿನ ಶುದ್ಧತೆಯನ್ನು ಸಾಬೀತುಪಡಿಸುವಂತೆ ಆಗ್ರಹಿಸಿ ಹೈಕೋರ್ಟ್‍ನಲ್ಲಿ ಪಿಐಎಲ್ ಸಲ್ಲಿಸಿ ತಡೆಯಾಜ್ಞೆ ತಂದಿದ್ದಾರೆ.
ನ್ಯಾಯಾಲಯದ ತಡೆಯಾಜ್ಞೆ ಹಿನ್ನೆಲೆಯಲ್ಲಿ ಕೋಲಾರ ಶಾಸಕ ಕೆ.ಶ್ರೀನಿವಾಸಗೌಡ ಯೋಜನೆಯ ಬಗ್ಗೆ ಅಪಪ್ರಚಾರ ಮಾಡುವವರ ವಿರುದ್ಧ ಸವಾಲು ಎಸೆದು ನೀರು ಸೇವಿಸಿದ್ದಾರೆ. ಈ ವೇಳೆ ಶಾಸಕ ಶ್ರೀನಿವಾಸಗೌಡ ಹಾಗೂ ಅವರ ನೂರಾರು ಬೆಂಬಲಿಗರು ಕೂಡ ಅವರಿಗೆ ಸಾಥ್ ನೀಡಿದರು. ಇತ್ತೀಚೆಗೆ ಕೋಲಾರಕ್ಕೆ ಆಗಮಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ಕೆ.ಸಿ.ವ್ಯಾಲಿ ಯೋಜನೆಯ ಬಗ್ಗೆ ವಿರೋಧ ವ್ಯಕ್ತಪಡಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ನಾನು ಬಯಲು ಸೀಮೆ ಜಿಲ್ಲೆಗೆ ನೀರು ಹರಿಸುವ ಯೋಜನೆಗಳನ್ನ ಜಾರಿ ಮಾಡಿದ್ದೇನೆ. ಆದರೂ ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ ಎಂದಿದ್ದರು.
ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲೆಯ ನರಸಾಪುರ ಗ್ರಾಮ ಪಂಚಾಯ್ತಿಯಿಂದ ಕೆಲವು ಕೊಳವೆ ಬಾವಿ ನೀರು ಬಳಸಲು ಯೋಗ್ಯವಲ್ಲ ಎಂದು ಪಂಚಾಯತ್ ಸಾರ್ವಜನಿಕರಿಗೆ ತಿಳಿಸಿತ್ತು. ಸದ್ಯ ಯೋಜನೆ ಕುರಿತು ಸಲ್ಲಿಕೆಯಾಗಿರುವ ಪಿಐಎಲ್ ವಿಚಾರಣೆ ಬುಧವಾರ ನಡೆಯಲಿದೆ.