– ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಶ್ರೀಗಳು
ದಾವಣಗೆರೆ: ಸರ್ಕಾರದ ವಿರುದ್ಧ ಹೋದರೆ ನಮ್ಮ ಕೆಲಸ ಆಗುವುದಿಲ್ಲ. ಅವರ ಬೆನ್ನು ತಟ್ಟಿ ಅವರ ಜೊತೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಪಂಚಮಸಾಲಿಯ ಶ್ರೀ ವಚನಾನಂದ ಸ್ವಾಮೀಜಿಗೆ ಅವರ ಸಮ್ಮುಖದಲ್ಲೇ ಕಿವಿಮಾತು ಹೇಳಿದರು.
Advertisement
ಜಿಲ್ಲೆಯ ಹರಿಹರದ ಪಂಚಮಸಾಲಿ ಪೀಠದಲ್ಲಿ ನಡೆಯುತ್ತಿರುವ ಹರ ಜಾತ್ರೆಯ ಅಂತಿಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ನಮ್ಮವರು ಮಠಗಳಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಆದರೆ ಮಠಗಳು ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿವೆ ಎನ್ನುವುದು ಗೊತ್ತಿಲ್ಲ. ಅದರಲ್ಲೂ ನಮ್ಮ ಜಿಲ್ಲೆಗೆ ನಮ್ಮ ಜನಾಂಗದ(ವೀರಶೈವ ಲಿಂಗಾಯತ) ಅಧಿಕಾರಿಗಳನ್ನು ಯಡಿಯೂರಪ್ಪ ನೀಡಿದ್ದಾರೆ. ಸಿದ್ದರಾಮಯ್ಯ ಇದ್ದಾಗ ಬರೀ ಕುರುಬರೇ ಇದ್ದರು ಎಂದು ಲೇವಡಿ ಮಾಡಿದರು. ವೀರಶೈವ-ಲಿಂಗಾಯತ ಎನ್ನುವ ಯುದ್ಧ ಶಮನ ಮಾಡುವುದು ಹೇಗೆ ಎಂದು ಗೊತ್ತಾಗುತ್ತಿರಲಿಲ್ಲ. ಆಗ ಯಡಿಯೂರಪ್ಪ ನನ್ನ ಬೆನ್ನು ತಟ್ಟಿ ನಾನಿದ್ದೇನೆ ಎಂದಿದ್ದಕ್ಕೆ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿ ಮುಂದುವರಿಯುತ್ತಿದ್ದೇನೆ ಎಂದರು. ಇದನ್ನೂ ಓದಿ: ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಬಿಎಸ್‍ವೈ – ವೇದಿಕೆ ಮೇಲೆಯೇ ಸ್ವಾಮೀಜಿ ವಿರುದ್ಧ ಕೆಂಡಾಮಂಡಲ
Advertisement
ಶ್ರೀಗಳಿಗೆ ಕಿವಿ ಮಾತು:
ಸ್ವಾಮೀಜಿಗಳು ಬಹಳ ಸ್ಪೀಡಾಗಿ ಹೋಗುತ್ತಿದ್ದೀರಿ, ಅದಕ್ಕೆ ಬ್ರೇಕ್ ಹಾಕಿ. ಸಮಾಜದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ. ಸರ್ಕಾರದ ವಿರುದ್ಧ ಹೋದರೆ ನಮ್ಮ ಕೆಲಸ ಆಗುವುದಿಲ್ಲ. ಅವರ ಬೆನ್ನುತಟ್ಟಿ ಅವರ ಜೊತೆ ಹೋಗಬೇಕು ಎಂದು ಮಾಜಿ ಸಚಿವ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ವಚನಾನಂದ ಸ್ವಾಮೀಜಿಗಳಿಗೆ ಸಲಹೆ ನೀಡಿದರು.
Advertisement
Advertisement
ಇದಕ್ಕೆ ಉತ್ತರಿಸಿದ ಪಂಚಮಸಾಲಿ ಸಮಾಜದ ಶ್ರೀ ವಚನಾನಂದ ಸ್ವಾಮೀಜಿ, ಹರ ಜಾತ್ರೆಯಲ್ಲಿ ಸಿಎಂ ಎದುರು ಮಾತನಾಡಿದ ತಮ್ಮ ಹೇಳಿಕೆಗೆ ಬದ್ಧರಾಗಿದ್ದಾಗಿ ತಿಳಿಸಿದ್ದಾರೆ. ನಾನು ಎನೇ ಮಾಡಿದರೂ ಸಮಾಜದ ಹಿತಕ್ಕಾಗಿಯೇ. ಯಾರ ಮೇಲೆ ಸಿಟ್ಟಾದರೂ ಅದು ಸಹ ಸಮಾಜದ ಹಿತಕ್ಕಾಗಿಯೇ ಎಂದು ಪರೋಕ್ಷವಾಗಿ ಸಿಎಂ ಬಿಎಸ್‍ವೈ ಎದುರು ಪ್ರಸ್ತಾಪಿಸಿದ್ದನ್ನು ಸಮರ್ಥಿಸಿಕೊಂಡರು. ತಾಯಿ ಒಂದು ಕೈಯಲ್ಲಿ ಹಾಲಿನ ಬಟ್ಟಲು, ಇನ್ನೊಂದು ಕೈಯಲ್ಲಿ ಕೋಲು ಹಿಡಿದಿರುತ್ತಾಳೆ. ಕಾರಣ ಕೋಲು ತೋರಿಸಿ ಮಗು ಹಾಲು ಕುಡಿಯುವಂತೆ ಮಾಡುವುದು ತಾಯಿಯ ಉದ್ದೇಶ. ಅದೇ ರೀತಿ ನಮ್ಮ ಸಮಾಜ ಸಶಕ್ತವಾಗಲಿ ಎಂಬ ಉದ್ದೇಶದಿಂದ ಸಿಟ್ಟಾಗಬೇಕಾಗುತ್ತದೆ ಎಂದು ತಿಳಿಸಿದರು.