ಮಂಡ್ಯ: ನನ್ನ ಮೇಲೆ ಕಲ್ಲು ತೂರಾಟ ನಡೆಸಿರುವುದು ರಾಜಕೀಯ ಪ್ರೇರಿತವಲ್ಲ. ಬದಲಾಗಿ ಯಾರೋ ಕಿಡಿಗೇಡಿಗಳು ಮಾಡಿರುವ ಕೆಲಸ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್ ಪುಟ್ಟರಾಜು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶಾಸಕರು, ಕಳೆದ ರಾತ್ರಿ ಪಾಂಡವಪುರ ಪಟ್ಟಣದಲ್ಲಿ ಯಾರೋ ಕಿಡಿಗೇಡಿಗಳು ಬಸ್, ಕಾರು, ಮೊಬೈಲ್ ಅಂಗಡಿ ಸೇರಿದಂತೆ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ ನಮ್ಮ ಮನೆ ಮೇಲೂ ಕಲ್ಲು ತೂರಿದ್ದಾರೆ. ಇದೊಂದು ರಾಜಕೀಯ ಪ್ರೇರಿತವಲ್ಲ. ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯವಾಗಿದೆ. ಇದಕ್ಕೂ ಮೊದಲು ಕಿಡಿಗೇಡಿಗಳು ಪೆಟ್ರೋಲ್ ಬಂಕ್ ವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ. ಆದ್ದರಿಂದ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಸಾರ್ವಜನಿಕರು ಯಾವುದೇ ಆತಂಕಪಡದೆ ಶಾಂತಿ ಕಾಪಾಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಪಾಂಡವಪುರ ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಮಂಡ್ಯದಲ್ಲಿ ಪುಂಡರು ಅಟ್ಟಹಾಸ ಮೆರೆದಿದ್ದು ಶಾಸಕ ಪುಟ್ಟರಾಜು ಮನೆ ಸೇರಿದಂತೆ ಹಲವು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಪುಟ್ಟರಾಜು ಮನೆ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದು ವಿಕೃತಿ ಮೆರೆದಿದ್ದಾರೆ. ಕಿಡಿಗೇಡಿಗಳ ಕಲ್ಲು ತೂರಾಟದಿಂದ ಶಾಸಕರ ಮನೆಯ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ. ಅಲ್ಲದೆ ಪುಂಡರು ಮೂರು ಕಾರು, ಒಂದು ಖಾಸಗಿ ಬಸ್ ಹಾಗೂ ಹೋಂಡಾ ಶೋರೂಂ ಮೇಲು ಕಲ್ಲು ಎಸೆದಿದ್ದಾರೆ. ಇದನ್ನೂ ಓದಿ: ಯುವಕನ ಕೊಲೆ ಪ್ರಕರಣ- ಯುವತಿ ತಂದೆ, ತಾಯಿ ಸೇರಿ 10 ಮಂದಿ ಅರೆಸ್ಟ್
ಮೂರು ಕಾರುಗಳ ಗಾಜುಗಳಿಗೆ ಡ್ಯಾಮೇಜ್ ಆಗಿದೆ. ಒಂದು ಕಾರಿಗೆ ಭಾರೀ ಗಾತ್ರದ ಕಲ್ಲು ಎಸೆದಿದ್ದಾರೆ. ಕಿಡಿಗೇಡಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಪಾಂಡವಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮಧ್ಯರಾತ್ರಿ ಮಂಡ್ಯದಲ್ಲಿ ಪುಂಡರ ಅಟ್ಟಹಾಸ – ಶಾಸಕ ಸಿ.ಎಸ್.ಪುಟ್ಟರಾಜು ಮನೆ ಮೇಲೆ ಕಲ್ಲು ತೂರಾಟ