ಮಂಡ್ಯ: ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಜಿಲ್ಲೆಯ ಕೆ.ಆರ್.ಪೇಟೆ ಕ್ಷೇತ್ರದ ಮೂಲಕ ಖಾತೆ ತೆರೆದಿದ್ದ ಬಿಜೆಪಿ ಸದ್ಯ ಜಿಲ್ಲೆಯಲ್ಲಿ ಭದ್ರ ಬುನಾದಿ ನಿರ್ಮಿಸುವತ್ತ ಸಾಗಿದೆ. ಬಿಜೆಪಿ ಇದೀಗ ಜಿಲ್ಲೆಯ ಮತ್ತೆರಡು ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಮುಂದಾದಂತೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಶಾಸಕರಾದ ನಾಗಮಂಗಲದ ಸುರೇಶ್‍ಗೌಡ ಹಾಗೂ ಶ್ರೀರಂಗಪಟ್ಟಣದ ರವೀಂದ್ರ ಶ್ರೀಕಂಠಯ್ಯ ಅವರು ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆಗಳ ಕುರಿತ ಚರ್ಚೆ ಜಿಲ್ಲೆಯಲ್ಲಿ ದಟ್ಟವಾಗಿ ಕಾಣುತ್ತಿದೆ.
ಜೆಡಿಎಸ್ ಭದ್ರ ಕೋಟೆಯಾಗಿರುವ ಮಂಡ್ಯ ಜಿಲ್ಲೆಯನ್ನು ಸಂಪೂರ್ಣವಾಗಿ ಬಿಜೆಪಿ ಕೋಟೆಯನ್ನಾಗಿ ಮಾಡಿಕೊಳ್ಳಲು ಬಿಜೆಪಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಪರಿಣಾಮ ರಾಜ್ಯ ಬಿಜೆಪಿ ಸರ್ಕಾರ ಸೇಫ್ ಆದರೂ ಮತ್ತೊಂದು ಆಪರೇಷನ್ ಕಮಲ ಮಾಡಲು ಮಾತುಕತೆ ನಡೆಯುತ್ತಿದೆ ಎಂಬ ಮಾತು ಜಿಲ್ಲೆಯ ರಾಜಕೀಯ ಪಡಸಾಲೆಯಲ್ಲಿ ಕೇಳಿ ಬಂದಿದೆ. ಜೆಡಿಎಸ್‍ನ ಶಾಸಕರಾಗಿರುವ ಸುರೇಶ್‍ಗೌಡ ಮತ್ತು ರವೀಂದ್ರ ಶ್ರೀಕಂಠಯ್ಯ ಇಬ್ಬರು ಕೂಡ ಜೆಡಿಎಸ್‍ಗೆ ಗುಡ್ ಬಾಯ್ ಹೇಳಿ ಬಿಜೆಪಿ ಬಾವುಟ ಹಿಡಿಯಲು ಮನಸ್ಸು ಮಾಡಿದ್ದಾರೆ ಎಂದು ಅವರ ಆಪ್ತ ಮೂಲಗಳು ಹೇಳುತ್ತಿವೆ.
Advertisement
Advertisement
ಕೆ.ಆರ್.ಪೇಟೆ ಕ್ಷೇತ್ರದಲ್ಲಿ ನಾರಾಯಣಗೌಡ ಅವರ ಗೆಲುವು ನೋಡಿರುವ ಜೆಡಿಎಸ್ ಶಾಸಕರು ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಇದೇ ಸೂಕ್ತ ಎಂಬ ನಿರ್ಧಾರಕ್ಕೆ ಬಂದಂತೆ ಕಾಣುತ್ತಿದೆ. ಹೀಗಾಗಿ ಬಿಜೆಪಿಗೆ ಸೇರಿ ತಮ್ಮ ರಾಜಕೀಯ ಭವಿಷ್ಯವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಆಪರೇಷನ್ ಕಮಲ ಆದ ವೇಳೆಯೂ ಈ ಇಬ್ಬರೂ ಬಿಜೆಪಿಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಕಾರಣಾಂತರಗಳಿಂದ ಈ ಇಬ್ಬರೂ ಬಿಜೆಪಿಗೆ ಹೋಗಲಿಲ್ಲ, ಈಗ ಖಂಡಿತವಾಗಿಯೂ ಹೋಗುತ್ತಾರೆ ಎಂದು ಆಪ್ತ ಮೂಲಗಳು ಹೇಳುತ್ತಿವೆ. ಇಬ್ಬರು ಶಾಸಕರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ಮನಸ್ಸು ಮಾಡಿದ್ದು, ಸಚಿವ ಸಂಪುಟ ವಿಸ್ತರಣೆ ಬಳಿಕ 2ನೇ ಆಪರೇಷನ್‍ಗೆ ಕೈ ಹಾಕುವ ಸಾಧ್ಯತೆ ಹೆಚ್ಚಿವೆ.
Advertisement
ಈ ಕುರಿತು ಬಿಜೆಪಿ ಸೇರುವ ಬಗ್ಗೆ ಮಾತನಾಡಿದ್ದ ಸುರೇಶ್ ಗೌಡ ಅವರು ಈ ಸುದ್ದಿಯನ್ನು ಅಲ್ಲಗೆಳೆದಿದ್ದರು. ಅಲ್ಲದೇ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರೊಂದಿಗೂ ಸ್ನೇಹದಿಂದ ಇರುವುದಾಗಿ ಹೇಳಿದ್ದರು. ನನಗೆ ಆಫರ್ ಬಂದಿತ್ತು ಎಂದಷ್ಟೇ ನಾನು ಹೇಳಿದ್ದೇನೆ. ಆದರೆ ಪಕ್ಷ ಬಿಡುವುದಿಲ್ಲ, ಮೈತ್ರಿ ಸರ್ಕಾರ ಬಿದ್ದು ಹೋದ ಬಳಿಕ ನಾವ್ಯಾಕೆ ಬಿಜೆಪಿಗೆ ಹೋಗಲಿಲ್ಲ ಅನಿಸುತ್ತಿತ್ತು. ಆದರೆ ಇದೀಗ ಅನರ್ಹ ಶಾಸಕರ ಬಗ್ಗೆ ಆತ್ಮಾವಲೋಕನ ಮಾಡಿಕೊಂಡರೆ ನಾವು ತೆಗೆದುಕೊಂಡ ನಿರ್ಧಾರವೇ ಸರಿ ಎಂದನಿಸುತ್ತಿದೆ ಎಂದು ಸುರೇಶ್ ಗೌಡ ಹೇಳಿದ್ದರು. ಆದರೆ ಕೆಲ ದಿನಗಳ ಹಿಂದೆಯಷ್ಟೇ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಬಿಎಸ್‍ವೈ ಅವರ ಕಾಲಿಗೆ ಸುರೇಶ್ ಗೌಡ ಅವರು ನಮಸ್ಕರಿಸಿ ಅಚ್ಚರಿ ಮೂಡಿಸಿದ್ದರು.
Advertisement
ಜೆಡಿಎಸ್ ಸೇರ್ಪಡೆಯಾಗುವ ಸುದ್ದಿ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ರವೀಂದ್ರ ಶ್ರೀಕಂಠಯ್ಯ ಅವರು, ಈ ಬಾರಿಯ ಚುನಾವಣೆಯಲ್ಲಿ ನಾನು ಎಚ್‍ಡಿಕೆ ಅವರ ನೇತ್ರತ್ವದಲ್ಲಿ ಗೆದ್ದು ಬಂದಿದ್ದೇನೆ. ಯಾವುದೇ ಕಾರಣಕ್ಕೂ ನಾನು ಶಾಸಕ ಸ್ಥಾನ ಕೊನೆಯಾಗುವ ಅವಧಿಯವರೆಗೂ ಪಕ್ಷ ಬಿಡುವ ನಿರ್ಧಾರ ಮಾಡಲ್ಲ. ಕುಮಾರಸ್ವಾಮಿ ಅವರ ಮನಸ್ಸಿಗೆ ನೋವುಂಟು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.