ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನ ಸೇವೆ ಮಾಡಲು ಮಂಡ್ಯ ಜಿಲ್ಲೆಯ ಶಾಸಕರಿಗೆ ಎರಡು ಉತ್ತಮ ಖಾತೆ ನೀಡಿದ್ದಾರೆ ಎಂದು ಹೇಳುವ ಮೂಲಕ, ಸಣ್ಣನೀರಾವರಿ ಖಾತೆ ವಿರೋಧಿಸಿ ಸಚಿವ ಪುಟ್ಟರಾಜು ಪರ ಪ್ರತಿಭಟನೆ ಮಾಡಿದ ಸ್ವಪಕ್ಷದ ಕಾರ್ಯಕರ್ತರಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಇಂದು ಶ್ರೀರಂಗಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ತಮ್ಮ ನೂತನ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಜಿಲ್ಲೆಯ ಏಳೂ ಶಾಸಕರು ಒಗ್ಗಟ್ಟಾಗಿದ್ದೇವೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ದೇವೇಗೌಡರ ಸಂಬಂಧಿ ಸಾರಿಗೆ ಸಚಿವ ಡಿಸಿ ತಮ್ಮಣ್ಣ ಮತ್ತು ಸಣ್ಣ ನೀರಾವರಿ ಸಚಿವ ಸಿಎಸ್ ಪುಟ್ಟರಾಜು ನಡುವೆ ನಡೆಯುತ್ತಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಂಬಂಧಿಸಿದ ಹಗ್ಗ ಜಗ್ಗಾಟದ ಬಗ್ಗೆ ಮಾತನಾಡಿ, ಜಿಲ್ಲೆಯ ನಾಯಕರಲ್ಲಿ ಯಾವ ಗೊಂದಲವೂ ಇಲ್ಲ. ಪಕ್ಷದ ವರಿಷ್ಠರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವೆಲ್ಲ ಬದ್ಧ ಎಂದು ತಿಳಿಸಿದರು.
ಇದೇ ವೇಳೆ ಪುಟ್ಟರಾಜುಗೆ ನೀಡಿರುವ ಖಾತೆ ಒಳ್ಳೆಯ ಖಾತೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ತಾವು ಕೊಟ್ಟ ಮಾತಿನಂತೆ ಸಾಲ ಮನ್ನಾ ಮಾಡುತ್ತಾರೆ ಎಂದು ಇದೇ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ವಿಶ್ವಾಸ ವ್ಯಕ್ತಪಡಿಸಿದರು.