ರಾಯಚೂರು: ಜಮ್ಮು-ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧರ ಸಾವಿಗೆ ಸಂತಾಪ ಸೂಚಿಸಿ, ಬಳಿಕ ಬುದ್ಧಿಜೀವಿಗಳು ಹೇಳಿಕೆ ನೀಡುವಾಗ ಅವರ ನಾಲಗೆ ಮೇಲೆ ಹಿಡಿತವಿರಿಲಿ. ಇಲ್ಲದಿದ್ದರೆ ನಾಲಗೆ ಕತ್ತರಿಸಬೇಕಾಗುತ್ತದೆ ಎಂದು ಸುರಪುರ ಶಾಸಕ ರಾಜುಗೌಡ ಎಚ್ಚರಿಕೆ ನೀಡಿದ್ದಾರೆ.
ರಾಯಚೂರಿನಲ್ಲಿ ನಡೆದ ಆರೋಗ್ಯಕ್ಕಾಗಿ ಓಟ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುಲ್ವಾಮದಲ್ಲಿ ನಡೆದ ಘೋರ ಉಗ್ರರ ದಾಳಿಯಲ್ಲಿ ವೀರ ಯೋಧರು ಹುತಾತ್ಮರಾಗಿರುವುದು ಬೇಸರದ ಸಂಗತಿ. ಇದರಿಂದ ಇಡೀ ದೇಶಕ್ಕೆ ನೋವಾಗಿದೆ ಎಂದು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಯೋಧರ ಹತ್ಯೆಯನ್ನು ಸಂಭ್ರಮಿಸುವ ಪ್ರಜೆಗಳು, ನಟರು, ರಾಜಕಾರಣಿಗಳು ಹಾಗೂ ಉದ್ಯಮಿಗಳು ಯಾರೇ ಆಗಲಿ ಅವರು ದೇಶದ್ರೋಹಿಗಳು ಎಂದು ಕಿಡಿಕಾರಿದ್ದಾರೆ.
ಸಿಆರ್‌ಪಿಎಫ್‌ನ 40 ಕ್ಕೂ ಅಧಿಕ ಯೋಧರು ಬಲಿಯಾಗಿದ್ದಾರೆ. ಈ ಕೃತ್ಯವೆಸಗಿದ ಪಾಕ್ ಉಗ್ರರನ್ನು ಬುಡ ಸಮೇತ ಕಿತ್ತು ಎಸೆಯಬೇಕು ಎಂದು ನಾನು ಮೋದಿ ಅವರಿಗೆ ಮನವಿ ಮಾಡುತ್ತೇನೆ. ಆಗ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ದೊರೆಯುತ್ತದೆ. ಈ ವಿಚಾರವಾಗಿ ಎಲ್ಲಾ ಪಕ್ಷಗಳು ಒಂದಾಗಬೇಕಾಗಿದೆ. ಇಲ್ಲಿ ರಾಜಕೀಯ ಮಾಡುವುದು ಬೇಡ. ಗಡಿ ಯೋಧರು ಯಾವ ಜಾತಿ, ಪಕ್ಷ ಭೇದವಿಲ್ಲದೆ ನಾವೆಲ್ಲ ಭಾರತೀಯರೆಂದು ದೇಶವನ್ನು ಕಾಯುತ್ತಾರೆ. ಹಾಗೆಯೇ ನಾವೆಲ್ಲ ಒಂದಾಗಿ ಉಗ್ರರ ವಿರುದ್ಧ ನಿಲ್ಲಬೇಕು. ಯೋಧರ ಹತ್ಯೆಯನ್ನು ಸಂಭ್ರಮಿಸೋ ಜನರು ದೇಶದ್ರೋಹಿಗಳು. ಬುದ್ಧಿಜೀವಿಗಳು ಈ ರೀತಿಯ ಹೇಳಿಕೆ ನೀಡಿದರೆ ನಾಲಗೆ ಕತ್ತರಿಸಬೇಕಾಗುತ್ತದೆ. ಯಾರೇ ದೇಶದ್ರೋಹ ಹೇಳಿಕೆ ನೀಡಿದರೂ ಅವರ ಪ್ರತಿರೋಧಕ್ಕೆ ಯುವಕರ ಪಡೆ ಸಿದ್ಧವಾಗಿದೆ ಎಂದು ಶಾಸಕರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv