ಚಾಮರಾಜನಗರ: ಶಾಸಕ ಪುಟ್ಟರಂಗಶೆಟ್ಟಿ ಅವರು ಮಹಿಳಾ ಅಧಿಕಾರಿಗೆ ನೀಡಿರುವ ಮಾನಸಿಕ ಕಿರುಕುಳ ಆರೋಪವನ್ನು ಮುಚ್ಚಿ ಹಾಕಲು, ಗಿರಿಜನರನ್ನು ಬೆದರಿಸಿ ಚಾಮರಾಜನಗರಕ್ಕೆ ಕರೆತಂದು ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜನಗರ ವಿಧಾನ ಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ ಅವರು ನನಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳಾ ಅಧಿಕಾರಿ ಸರಸ್ವತಿ ಅವರು ಆರೋಪ ಮಾಡಿದ್ದರು. ಈ ಬಗ್ಗೆ ಪಬ್ಲಿಕ್ ಟಿವಿಯಲ್ಲಿ ವಿಸ್ತೃತ ವರದಿಯಾಗಿತ್ತು. ಮಂಗಳವಾರ ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಘೋಷಣೆ ಕೂಗಿದ್ದರು. ಇದನ್ನು ನೋಡಿದವರು ಸರಸ್ವತಿ ಅವರು ಭ್ರಷ್ಟ ಅಧಿಕಾರಿ ಇರಬಹುದು ಎಂದುಕೊಂಡಿದ್ದರು. ಆದರೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಮಾತನಾಡಿಸಿದಾಗ ಇದು ಶಾಸಕ ಪುಟ್ಟರಂಗಶೆಟ್ಟಿ ಅವರ ಕುತಂತ್ರ ಎಂಬುದು ಬಯಲಾಗಿದೆ.
Advertisement
ಚಾಮರಾಜನಗರದಲ್ಲಿ ಒಂದು ಸಭೆ ಇದೆ ಅಲ್ಲಿಗೆ ಬನ್ನಿ ಎಂದು ಪುಟ್ಟರಂಗಶೆಟ್ಟಿ ಅವರ ಬಂಟರು ಗಿರಿಜನರನ್ನು ಕರೆದಿದ್ದು, ಇದಕ್ಕೆ ಒಪ್ಪದ ಗಿರಿಜನರು ನಾವು ಬರುವುದಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರು ನೀವು ಬರಲಿಲ್ಲ ಎಂದರೆ ನಿಮ್ಮ ಮನೆಗಳನ್ನು ಕೆಡುವುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ. ಇದಕ್ಕೆ ದಿಕ್ಕು ತೋಚದ ಜನರು ಚಾಮರಾಜನಗರದಲ್ಲಿ ಸಭೆ ಇದೆ ಎಂದು ಬಂದಿದ್ದಾರೆ. ನಗರಕ್ಕೆ ಬಂದ ಮೇಲೆ ಎಲ್ಲರೂ ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಬೇಕು ಎಂದು ಹೆದರಿಸಿದ್ದಾರೆ. ಇದಕ್ಕೆ ಹೆದರಿದ ಗಿರಿಜನರು ಸರಸ್ವತಿ ಅವರ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ.
Advertisement
ಸರಸ್ವತಿ ಮೇಡಂ ನಮಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಮೊದಲೇ ವಿಷಯ ತಿಳಿದಿದ್ದರೆ ನಾವು ಪ್ರತಿಭಟನೆಗೆ ಹೋಗುತ್ತಿರಲಿಲ್ಲ ಎಂದು ಪ್ರತಿಭಟನೆಯಲ್ಲಿ ಭಾಗಿಯಾದವರು ಹೇಳುತ್ತಾರೆ.