ಹಾಸನ: ಹಾಸನದಲ್ಲಿ ಶಾಸಕ ಪ್ರೀತಂಗೌಡ (Preetham Gowda) ಮತ್ತು ಹೆಚ್.ಡಿ.ರೇವಣ್ಣ (HD Revanna) ಮಧ್ಯೆ ರಾಜಕೀಯ ಜಟಾಪಟಿ ಜೋರಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ (K Gopalaiah) ಅಧ್ಯಕ್ಷತೆಯಲ್ಲಿ ನಡೆದ 2022-2023ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀನಾ ಸಭೆಯಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು.
Advertisement
ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ, ನಮ್ಮ ಸರ್ಕಾರದ ಅವಧಿಯಲ್ಲಿ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿತ್ತು. ಈ ಯೋಜನೆ ಬದಲಿಸಿ ಬೇರೆ ಕಾಮಗಾರಿಗೆ ಬಳಸಲಾಗಿದೆ. ಕೆಲಸ ಕೂಡ ಸರಿಯಾಗಿ ನಡೆಯುತ್ತಿಲ್ಲ. ಈ ಬಗ್ಗೆ ತನಿಖೆ ನಡೆಯಬೇಕು ಎಂದರು. ಇದನ್ನೂ ಓದಿ: ನನ್ಮೇಲೆ ದಾಳಿ ಮಾಡಿದ್ರೆ, ನಾನು ಆನೆಯನ್ನ ಕೊಲ್ತೀನಿ: ಮಾಜಿ ಶಾಸಕ
Advertisement
Advertisement
ರೇವಣ್ಣ ಮಾತಿಗೆ ಪ್ರತ್ಯುತ್ತರ ನೀಡಿದ ಶಾಸಕ ಪ್ರೀತಂಗೌಡ, ಯಾವ ತನಿಖೆ ಬೇಕಾದ್ರೂ ಮಾಡಿಸಲಿ ನಾನು ಹೆದರಲ್ಲ. ಕ್ಯಾಬಿನೆಟ್ (Cabinet) ನಿರ್ಧಾರವನ್ನು ಇಲ್ಲಿ ಚರ್ಚೆ ಮಾಡುವುದಾದ್ರೆ ಕ್ಯಾಬಿನೆಟ್‍ನ್ನು ಕೆಡಿಪಿ ಮಟ್ಟಕ್ಕೆ ಇಳಿಸಬೇಡಿ ಸಂಪುಟ ಸಭೆಯಲ್ಲಿ ತೀರ್ಮಾನ ಆದಂತೆ ಕಾಮಗಾರಿ ನಡೆಯುತ್ತಿದೆ ಎಂದರು. ಮತ್ತೆ ರೇವಣ್ಣ ಮಾತನಾಡಿ, ನೀರಾವರಿ ಸೇರಿದಂತೆ ಬಿಜೆಪಿ ಸರ್ಕಾರ, ಜಿಲ್ಲೆಗೆ ಯಾವುದೇ ಅನುದಾನ ಕೊಟ್ಟಿಲ್ಲ. ಈ ಸರ್ಕಾರಕ್ಕೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದರು. ಹಳೇಬೀಡು ರಣಘಟ್ಟ ನೀರಾವರಿ ಯೋಜನೆಗೆ ಹಣ ಕೊಟ್ಟಿಲ್ವಾ, ನೀವು ಬರೀ ಘೋಷಣೆ ಮಾಡಿ ಹೋಗ್ತೀರಾ, ಕೆಲಸ ಮಾಡೋದು ನಾವೇ. ನಾಚಿಕೆ ಯಾರಿಗೆ ಆಗಬೇಕೋ ಅವರಿಗೆ ಆಗಲಿ ಎಂದು ತಿರುಗೇಟು ನೀಡಿದ್ರು.
Advertisement
ವಾಕ್ಸಮರ ಮುಂದುವರಿಸಿದ ರೇವಣ್ಣ, ಕುಮಾರಸ್ವಾಮಿ (HD Kumaraswamy) ಅವಧಿಯಲ್ಲಿ ಮಾಡಿದ್ದು, ನಿಮ್ಮ ಸರ್ಕಾರ ಏನೂ ಮಾಡಿಲ್ಲ. ಯಡಿಯೂರಪ್ಪ (BS Yediyurappa) ಈ ಜಿಲ್ಲೆಗೆ ಏನೆಲ್ಲಾ ಅನ್ಯಾಯ ಮಾಡಿದ್ದಾರೆ ಎಂಬುದನ್ನು ಸಮಯ ಬಂದಾಗ ಹೇಳುತ್ತೇನೆ ಎಂದರು. ನೀವು ಬಜೆಟ್ (Budget) ನಲ್ಲಿ ಅನೌನ್ಸ್ ಮಾಡಿ ಮನೆಗೆ ಹೋಗುವುದಲ್ಲ. ಕೆಲಸ ಮಾಡಿಸಬೇಕು. ರಾಜಕಾರಣ ಹೊರಗೆ ಮಾಡೋಣ, ನಾನು ಹೆದರಿ ಓಡಿ ಹೋಗೋದಿಲ್ಲ. ಇಲ್ಲಿ ಕೆಡಿಪಿ ಸಭೆ ನಡೆಯುತ್ತಿದೆ. ಜಿಲ್ಲೆಯ ಅಭಿವೃದ್ಧಿ ಕಾರ್ಯಕಗಳ ಬಗ್ಗೆ ಮಾತಾಡಿ ಎಂದು ಪ್ರೀತಂಗೌಡ ಹೇಳಿದರು.
ಜಲಜೀವನ್ ಮಾಡಿರುವುದು ಪ್ರಧಾನಿ ಮೋದಿ (Narendra Modi) ಅವರು, ಅದನ್ನೂ ನಾನೇ ಮಾಡಿದ್ದು ಅಂತಿಯಾ ಎಂದು ರೇವಣ್ಣ ಅವರನ್ನು ಏಕ ವಚನದಲ್ಲೇ ಪ್ರೀತಂ ಕುಟುಕಿದರು. ಜಿಲ್ಲಾ ಕೇಂದ್ರ ಎಂದು ಎಲ್ಲರೂ ಹಾಸನಕ್ಕೆ ಬಂದು ಎಂಎಲ್‍ಎ ಗಿರಿ ಮಾಡಿದರೆ ನಾನು ನನ್ನ ಕ್ಷೇತ್ರಬಿಟ್ಟು ಹೊಳೆನರಸೀಪುರಕ್ಕೆ ಹೋಗಿ ಅಧಿಕಾರ ಚಲಾಯಿಸಲು ಆಗುತ್ತಾ? ರೇವಣ್ಣ ಅವರಿಗೆ ಜಿಲ್ಲಾ ಕೇಂದ್ರದ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ 2023 ರ ಚುನಾವಣೆಯಲ್ಲಿ ಹಾಸನದಿಂದಲೇ ಸ್ಪರ್ಧಿಸಲಿ ಎಂದು ಮತ್ತೊಮ್ಮೆ ಬಹಿರಂಗ ಆಹ್ವಾನ ನೀಡಿದರು.
ರೇವಣ್ಣ ಅವರ ಆರೋಪಕ್ಕೆ ಪ್ರೀತಂಗೌಡ ಖಾರವಾಗಿಯೇ ಪ್ರತ್ಯುತ್ತರ ನೀಡಿದ್ದು, ರೇವಣ್ಣ ಮತ್ತಷ್ಟು ಕೆರಳಲು ಕಾರಣವಾಯಿತು. ನೀನಾ, ನಾನಾ ಎಂಬಂತೆ ಇಬ್ಬರ ನಡುವೆ ನಡೆದ ವಾಕ್ಸಮರ ಮುಂದಿನ ಚುನಾವಣೆಯಲ್ಲಿ ಎದುರು ಬದುರಾಗುವ ಮುನ್ಸೂಚನೆಯೇ ಎಂದು ಅನೇಕರು ಮಾತನಾಡಿಕೊಂಡರು.