– 30 ವರ್ಷದ ಬಳಿಕ ಕತ್ತಿ ಕುಟುಂಬವನ್ನು ಕೈ ಬಿಟ್ಟ ಕಾರ್ಖಾನೆ
ಬೆಳಗಾವಿ: ದಿಢೀರ್ ಬೆಳವಣಿಗೆಯಲ್ಲಿ ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆ (Hiranyakeshi Sakkare Karkhane) ಅಧ್ಯಕ್ಷ ಸ್ಥಾನಕ್ಕೆ ಹುಕ್ಕೇರಿ ಶಾಸಕ ನಿಖಿಲ್ ಕತ್ತಿ (Nikhil Katti) ರಾಜೀನಾಮೆ ನೀಡಿದ್ದಾರೆ.
ಹೀರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್ ನೀಡುವ ನಿರ್ಧಾರಕ್ಕೆ ಆಡಳಿತ ಮಂಡಳಿಯಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಾಸಕ ನಿಖಿಲ್ ಕತ್ತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ಸೆಪ್ಟೆಂಬರ್‌ನಲ್ಲಿ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಲೀಸ್ ಆಧಾರದಲ್ಲಿ ಖಾಸಗಿಯವರಿಗೆ ನಡೆಸಲು ಕೊಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಈ ನಿರ್ಧಾರಕ್ಕೆ ಹೆಚ್ಚಿನ ಸಂಖ್ಯೆಯ ಆಡಳಿತ ಮಂಡಳಿ ಸದಸ್ಯರಿಂದ ವಿರೋಧ ವ್ಯಕ್ತವಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಲೀಸ್ ನೀಡುವ ಬಗ್ಗೆ ಸಾರ್ವಜನಿಕವಾಗಿ ಹಲವಾರು ಚರ್ಚೆಗಳು ನಡೆದಿದ್ದವು. ರೈತರು ಕಟ್ಟಿರುವ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಲೀಸ್ ನೀಡಬೇಡಿ ಎಂದು ಆಡಳಿತ ಮಂಡಳಿಯ ಸದಸ್ಯರು ಒತ್ತಾಯಿಸಿದ್ದರು.
ಇಷ್ಟು ದಿನಗಳ ಕಾಲ ಕತ್ತಿ ಕುಟುಂಬದಲ್ಲಿ ಹಿಡಿತದಲ್ಲಿದ್ದ ಅಧಿಕಾರದ ಚುಕ್ಕಾಣಿಯನ್ನು ಆಡಳಿತ ಮಂಡಳಿಯವರು ಸದ್ಯ ಟೇಕ್ ಓವರ್ ಮಾಡಿದ್ದು ಸಕ್ಕರೆ ಕಾರ್ಖಾನೆಯಲ್ಲಿನ ದುಂದು ವೆಚ್ಚಗಳ ಕಡಿವಾಣ ಸೇರಿದಂತೆ ಅನವಶ್ಯಕ ಕೆಲಸಗಳಿಗೆ ಬ್ರೇಕ್ ಹಾಕಿ ವ್ಯವಸ್ಥಿತವಾಗಿ ಕಾರ್ಖಾನೆ ನಡೆಸಲು ತೀರ್ಮಾನಿಸಿದ್ದಾರೆ. ಇದನ್ನೂ ಓದಿ: ನಕಲಿ ಫೈನಾನ್ಸ್ ರಿಕವರಿ ಟೀಂನಿಂದ ವಸೂಲಿ ದಂಧೆ – ನಾಲ್ವರು ಆರೋಪಿಗಳ ಬಂಧನ
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾರ್ಗದರ್ಶನದಲ್ಲಿ ಕಾರ್ಖಾನೆ ನಡೆಸಲು ಆಡಳಿತ ಮಂಡಳಿ ಸದಸ್ಯರು ತೀರ್ಮಾನಿಸಿದ್ದಾರೆ. ಆಡಳಿತ ಮಂಡಳಿ ಸದಸ್ಯರೆಲ್ಲರೂ ನಿಖಿಲ್ ಕತ್ತಿ ಅವರಿಗೆ ಚುನಾವಣಾ ಸಂದರ್ಭದಲ್ಲಿ ಬೆಂಬಲ ಕೊಡಲು ತೀರ್ಮಾನಿಸಿದ್ದಾರೆ.
ಹೀರಣ್ಯಕೇಶಿ ಸಕ್ಕರೆ ಕಾರ್ಖಾನೆಯ ಮುಂದಿನ ಅಧ್ಯಕ್ಷರಾಗಿ ಮುಖಂಡ ಹುಕ್ಕೇರಿ ಪಟ್ಟಣದ ಅಶೋಕ ಪಟ್ಟಣಶೆಟ್ಟಿ, ಉಪಾಧ್ಯಕ್ಷರಾಗಿ ನೊಗನಿಹಾಳ ಗ್ರಾಮದ ಅಜ್ಜಪ್ಪ ಕಲ್ಲಟ್ಟಿ ಆಯ್ಕೆಯಾಗುವ ಕುರಿತು ಚರ್ಚೆ ನಡೆಯುತ್ತಿದೆ.