ಹಾವೇರಿ: ಜಿಲ್ಲಾಧಿಕಾರಿ ಶ್ರೀ ಕೃಷ್ಣ ಭಾಜಪೇಯಿ ಅವರನ್ನು ಭೇಟಿ ಮಾಡಿದ ಶಾಸಕ ನೆಹರು ಓಲೇಕಾರ ಅವರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿ ಎಂದು ಮನವಿ ಮಾಡಿಕೊಂಡರು.
ಆಗಸ್ಟ್ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಜಿಲ್ಲೆಯ ಸವನೂರ ತಾಲೂಕಿನ ಕೆಲ ಹಳ್ಳಿಗಳ ಮುಖ್ಯ ರಸ್ತೆಗಳು ಹಾಳಾಗಿದ್ದು, ಹಾಳಾದ ರಸ್ತೆ ಮಾರ್ಗವಾಗಿ ವಾಹನಗಳ ಓಡಾಟ ದುಸ್ತರವಾಗಿದೆ. ಆದ್ದರಿಂದ ಕೂಡಲೇ ಹಾಳಾದ ರಸ್ತೆಗಳ ಪುನರ್ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಿ, ಹಾಳಾದ ರಸ್ತೆಗಳನ್ನು ದುರಸ್ಥಿಗೊಳಿಸುವ ಕಾರ್ಯ ಪ್ರಾರಂಭಿಸಬೇಕೆಂದು ರಸ್ತೆ ಹಾಳಾದ ಹಳ್ಳಿಗಳ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಒದಗಿಸಿದರು.
ಈ ಸಂದರ್ಭದಲ್ಲಿ ಸವನೂರ ತಾಲೂಕ ಪಂಚಾಯತ್ ಅಧ್ಯಕ್ಷರಾದ ತಿಪ್ಪಣ್ಣ ಸುಬ್ಬಣ್ಣನವರ, ಮುಖಂಡರಾದ ನಾಗರಾಜ ಕೋಣನವರ, ಅಶೋಕ ಬಣಕಾರ್, ಎನ್.ಪಿ ಚಾವಡಿ, ರಾಜು ಬಳ್ಳಾರಿ, ನೀಲಪ್ಪ ರಿತ್ತಿ ಹಾಗೂ ಪ್ರಮುಖರು ಉಪಸ್ಥಿತರಿದ್ದರು.