ಮಂಡ್ಯ: ಸರ್ಕಾರ ನೀಡುವ ಎಮ್ಮೆ ಸಾಲ ಪಡೆದ ಮಹಿಳೆಯರು ಸೀರೆ ಉಟ್ಟು, ಮಾರ್ನಾಮಿ ಹಬ್ಬ ಮಾಡಿ ಸಾಲ ತೀರಿಸುತ್ತಿಲ್ಲ ಎಂದು ಮಾತಾಡಿದ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಮೇಲ್ವಿಚಾರಕನಿಗೆ ಬಹಿರಂಗ ಸಭೆಯಲ್ಲೇ ಶಾಸಕರು ತರಾಟೆಗೆ ತೆಗೆದುಕೊಂಡ ಘಟನೆ ಮಂಡ್ಯ ಜಿಲ್ಲೆ, ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ.
ಕೃಷ್ಣರಾಜಪೇಟೆ ತಾಲ್ಲೂಕಿನ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ಪ್ರತಿನಿಧಿಗಳಿಗೆ, ಸಂಜೀವಿನಿ ಗ್ರಾಮೀಣ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸಹಾಯ ಧನದ ಚೆಕ್ ವಿತರಣಾ ಸಮಾರಂಭವನ್ನು ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಸ್ತ್ರೀ ಶಕ್ತಿ ಸ್ವಸಹಾಯ ಸಂಘಗಳ ತಾಲೂಕು ಮೇಲ್ವಿಚಾರಕ ನಂಜುಂಡಯ್ಯ ಎಂಬುವವರು, ಸರ್ಕಾರ ನೀಡುವ ಸಾಲ ಸೌಲಭ್ಯದ ಸಹಾಯ ಧನ ಯೋಜನೆ ದುರ್ಬಳಕೆಯಾಗುತ್ತಿದೆ. ಈ ಹಣವನ್ನು ಹಬ್ಬ ಹುಣ್ಣಿಮೆ ಮಾಡಲು, ಸೀರೆಕೊಳ್ಳಲು ಹೆಣ್ಣು ಮಕ್ಕಳು ಬಳಸಿಕೊಂಡು ಸಕಾಲಕ್ಕೆ ಸಾಲ ಮರುಪಾವತಿ ಮಾಡುತ್ತಿಲ್ಲ ಎಂದು ಆರೋಪ ಮಾಡಿದರು.
ಮೇಲ್ವಿಚಾರಕರ ಆರೋಪಕ್ಕೆ ಗರಂ ವೇದಿಕೆ ಮೇಲಿದ್ದ ಶಾಸಕ ನಾರಾಯಣಗೌಡ, ನನ್ನ ಸಹೋದರಿಯರನ್ನು ಅಪಮಾನ ಮಾಡುತ್ತೀದ್ದಿಯಾ. ಮಹಿಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡಿದರೆ ತಕ್ಕ ಪಾಠ ಕಲಿಸುತ್ತೇನೆ ಲೋ…..ಎಂದು ಅವಾಚ್ಯ ಶಬ್ದ ಪ್ರಯೋಗಿಸಿದರು. ಅಲ್ಲದೇ ನಮ್ಮ ತಾಲ್ಲೂಕಿನ ಹೆಸರು ಹಾಳು ಮಾಡಲು ನೀನು ಬಂದಿದ್ದೀಯಾ. ನಮ್ಮಹೆಣ್ಣು ಮಕ್ಕಳು ನಿನ್ನ ದುಡ್ಡಲ್ಲಿ ಸೀರೆ ಉಡುತ್ತಿದ್ದಾರಾ? ನಿನ್ನ ನಂಬಿಕೊಂಡು ಹೆಣ್ಣು ಮಕ್ಕಳು ಜೀವನ ನಡೆಸುತ್ತಿಲ್ಲ. ಅವರನ್ನು ಕ್ಷಮೆ ಕೇಳು ಎಂದು ಆಕ್ರೋಶ ಹೊರಹಾಕಿದರು. ಶಾಸಕರ ಮಾತಿಗೆ ಮಣಿದು ನಂಜುಂಡಯ್ಯ ಕಾರ್ಯಕ್ರಮಕ್ಕೆ ಆಗಮಿಸಿದ್ದ ಫಲಾನುಭವಿ ಮಹಿಳೆಯರ ಬಳಿ ಕ್ಷಮೆಯಾಚಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv