ಮೈಸೂರು: ಚಾಮರಾಜನಗರದ ಹನೂರು ತಾಲೂಕಿನ ಮಾರಮ್ಮ ದೇವಾಲಯದ ವಿಷ ಪ್ರಸಾದ ತಿಂದು ಅಸ್ವಸ್ಥರಾಗಿದ್ದ ಮಹಿಳೆಗೆ ಚಿಕಿತ್ಸೆ ನೀಡದೆ ತಡ ಮಾಡಿದ ವೈದ್ಯರಿಗೆ ಶಾಸಕ ನಾಗೇಂದ್ರ ತರಾಟೆ ತೆಗೆದುಕೊಂಡಿದ್ದಾರೆ.
ತಮಿಳುನಾಡು ಮೂಲದ ಲಕ್ಷೀ ಎಂಬವರ ಸ್ಥಿತಿ ಗಂಭೀರವಾಗಿತ್ತು, ಇದರಿಂದ ಅವರನ್ನು ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ವೈದ್ಯರು ಮೊದಲು ಅಸ್ವಸ್ಥಗೊಂಡ ಮಹಿಳೆಗೆ ಚಿಕಿತ್ಸೆ ಕೊಡದೆ ಅವರ ಬಳಿಯೇ ಮಾಹಿತಿ ಪಡೆಯಲು ವೈದ್ಯರು ಮುಂದಾಗಿದ್ದಾರೆ. ಇದನ್ನು ಗಮನಿಸಿದ ನಾಗೇಂದ್ರ ಅವರು ವೈದ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮೊದಲು ರೋಗಿಗೆ ಚಿಕಿತ್ಸೆ ನೀಡಿ ಆ ಬಳಿಕ ಮಾಹಿತಿ ಪಡೆಯಿರಿ. ಇಂತಹ ಸಂದರ್ಭದಲ್ಲಿ ರೋಗಿಗಳ ಆರೋಗ್ಯ ಮುಖ್ಯ ಎಂದು ಶಾಸಕ ನಾಗೇಂದ್ರ ಅವರು ತಿಳಿಸಿದ್ದಾರೆ. ಬಳಿಕ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಅವರು, ಆಸ್ಪತ್ರೆಯಲ್ಲಿ ಸೇರಿರುವ ಎಲ್ಲಾ ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ. ಆದರೆ ಹೆಚ್ಚಿನ ಅವಶ್ಯಕತೆ ಇರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಸಹ ಸೂಚನೆ ನೀಡಲಾಗಿದೆ ಎಂದರು.
ಯಾವುದೇ ರೋಗಿಯ ಜಾತಿ, ಹೆಸರು ಬಗ್ಗೆ ತಿಳಿಯುವ ಮೊದಲು ಚಿಕಿತ್ಸೆ ನೀಡುವುದು ಮುಖ್ಯ. ಆದ್ದರಿಂದ ವೈದ್ಯರಿಗೆ ಈ ಕುರಿತು ಸ್ವಲ್ಪ ಏರು ಧ್ವನಿಯಲ್ಲಿ ಸೂಚನೆ ನೀಡಿದ್ದೇನೆ ಅಷ್ಟೇ. ಕೆ. ಆರ್ ಆಸ್ಪತ್ರೆಗೆ ಸಂಬಂಧಿಸಿದಂತೆ ಹೆಚ್ಚಿನ ಸೌಲಭ್ಯ ನೀಡಲು ಸದನದಲ್ಲೂ ಪ್ರಸ್ತಾಪ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಯಾವುದೇ ರೀತಿಯ ಲೋಪವಾಗದಂತೆ ನೋಡಿಕೊಳ್ಳಲು ಕ್ರಮಕೈಗೊಳ್ಳಲಾಗಿದೆ. ಎಲ್ಲಾ ರೋಗಿಗಳಿಗೂ ಉತ್ತಮ ಚಿಕಿತ್ಸೆ ನೀಡುತ್ತೇವೆ ಎಂದು ನಾಗೇಂದ್ರ ಅವರು ಸ್ಪಷ್ಟನೆ ನೀಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv