ಬಳ್ಳಾರಿ: ನಗರದ ಕೌಲ್ ಬಜಾರ್ ಪ್ರದೇಶ ವ್ಯಾಪ್ತಿಯ 26ನೇ ವಾರ್ಡಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲಾಡಳಿತ ಇಡೀ ಪ್ರದೇಶವನ್ನ ಕಂಟೈನ್‍ಮೆಂಟ್ ಝೋನ್ ಎಂದು ಘೋಷಿಸಿದೆ. ಹೀಗಾಗಿ ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ನಾಗೇಂದ್ರ ಅವರು ರೇಷನ್ ಕಿಟ್ ವಿತರಿಸಿದ್ದಾರೆ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (ಕೆಪಿಸಿಸಿ) ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ಈ ದಿನ ಕಂಟೈನ್‍ಮೆಂಟ್ ಏರಿಯಾದ ನೂರಾರು ಕುಟುಂಬ ಸದಸ್ಯರಿಗೆ ರೇಷನ್ ಕಿಟ್‍ಗಳನ್ನ ಶಾಸಕ ನಾಗೇಂದ್ರ ವಿತರಿಸಿದರು.
ಕೌಲ್ ಬಜಾರ್ ವ್ಯಾಪ್ತಿಯ 26ನೇಯ ವಾರ್ಡಿನ ಪ್ರತಿಯೊಂದು ಮನೆಗಳಿಗೆ ತೆರಳಿದ ಶಾಸಕ ಬಿ.ನಾಗೇಂದ್ರ ಅವರು, ರೇಷನ್ ಕಿಟ್, ತರಕಾರಿ, ಹಾಲು, ಮೊಸರನ್ನ ವಿತರಿಸಿದರು. ಒಂದು ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳ ಶಾಸಕ ನಾಗೇಂದ್ರ ಪೂರೈಸಿದ್ದಾರೆ.
ಈ ವೇಳೆ ಮಾತನಾಡಿದ ಶಾಸಕ ನಾಗೇಂದ್ರ, ಅಂದಾಜು ಸಾವಿರಕ್ಕೂ ಅಧಿಕ ಕಿಟ್‍ಗಳನ್ನ ವಿತರಿಸಲಾಯಿತು. ಅದರೊಂದಿಗೆ ತರಕಾರಿ, ಹಾಲು, ಮೊಸರನ್ನ ವಿತರಿಸಲಾಗಿದೆ. ಕಂಟೈನ್‍ಮೆಂಟ್ ಝೋನ್ ಎಂದು ಈ ಪ್ರದೇಶವನ್ನು ಘೋಷಣೆ ಮಾಡಲಾಗಿದ್ದು, ಅಗತ್ಯ ವಸ್ತುಗಳ ಕೊರತೆಯಾಗಬಾರದೆಂಬ ಸದುದ್ದೇಶದೊಂದಿಗೆ ಈ ನಿರ್ಧಾರಕ್ಕೆ ಬರಲಾಗಿದೆ. ವಾರಕ್ಕೆ ಆಗುವಷ್ಟು ಅಗತ್ಯ ವಸ್ತುಗಳನ್ನ ವಿತರಿಸಲಾಗಿದೆ. ವಾರದ ನಂತರ ಬೇಡಿಕೆಯಿದ್ದರೆ ಪೂರೈಕೆಗೂ ಸದಾ ಸಿದ್ಧವಿರುವುದಾಗಿ ಶಾಸಕ ನಾಗೇಂದ್ರ ತಿಳಿಸಿದ್ದಾರೆ.