ಬಾಗಲಕೋಟೆ: ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಬೀಳಗಿ ಶಾಸಕ ಮುರುಗೇಶ್ ನಿರಾಣಿ ಒಡೆತನದ ‘ನಿರಾಣಿ ಶುಗರ್ಸ್’ನ ಸಕ್ಕರೆಯನ್ನು ಜಪ್ತಿ ಮಾಡಲಾಗಿದೆ.
ಬಾಗಲಕೋಟೆ ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ಆದೇಶದಂತೆ ಮುಧೋಳ ತಹಶೀಲ್ದಾರ್, ಎಸ್.ಬಿ ಇಂಗಳೆ ನೇತೃತ್ವದ ಅಧಿಕಾರಿಗಳ ತಂಡ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದ ಹೊರವಲಯದಲ್ಲಿರುವ ನಿರಾಣಿ ಸಕ್ಕರೆ ಕಾರ್ಖಾನೆಗೆ ತೆರಳಿ ರೈತರಿಗೆ ನೀಡುವ ಬಾಕಿ ಹಣದ ಮೌಲ್ಯದಷ್ಟು ಕಾರ್ಖಾನೆಯ ಗೋದಾಮಿನಲ್ಲಿದ್ದ ಸಕ್ಕರೆ ವಶಕ್ಕೆ ಪಡೆದುಕೊಂಡಿದ್ದಾರೆ. 61 ಕೋಟಿ ರೂ. ಮೌಲ್ಯದ 1,56,575 ಕ್ವಿಂಟಲ್ ಸಕ್ಕರೆಯನ್ನು ಜಪ್ತಿ ಮಾಡಿದ್ದಾರೆ.
Advertisement
Advertisement
2018-19ನೇ ಸಾಲಿನಲ್ಲಿ 61 ಕೋಟಿ ರೂ. ಬಾಕಿ ಹಣ ಉಳಿಸಿಕೊಂಡಿದ್ದು, ಕಾಲಾವಕಾಶ ನೀಡಿದ್ದರೂ ರೈತರಿಗೆ ಬಾಕಿ ಹಣ ಪಾವತಿಸದ ಹಿನ್ನೆಲೆ ಕಾರ್ಖಾನೆಯ ಗೋದಾಮಿನಲ್ಲಿದ್ದ ಸಕ್ಕರೆ ಜಪ್ತಿ ಮಾಡಿ, ಗೋದಾಮಿಗೆ ಬೀಗಮುದ್ರೆ ಒತ್ತಲಾಗಿದೆ. ಸಾವರಿನ್ ಶುಗರ್ಸ್, ಜೆಮ್ ಶುಗರ್ಸ್, ನಿರಾಣಿ ಶುಗರ್ಸ್ ಕಾರ್ಖಾನೆಯ ಸಕ್ಕರೆ ಜಪ್ತಿ ಮಾಡುತ್ತಿದ್ದಂತೆ ಎಚ್ಚೆತ್ತ ರಬಕವಿಬನಹಟ್ಟಿ ತಾಲೂಕಿನ ಸಮೀರವಾಡಿ ಗ್ರಾಮದ ಬಳಿಯ ಗೋದಾವರಿ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದ 27.95 ಕೋಟಿ ರೂ. ಹಣವನ್ನು ಪಾವತಿಸಿ ಬಚಾವಾಗಿದ್ದಾರೆ.
Advertisement
Advertisement
ಇತ್ತೀಚೆಗಷ್ಟೆ ಸಿಎಂ ಬಾಕಿ ಉಳಿಸಿಕೊಂಡಿರುವ ಕಾರ್ಖಾನೆಗಳಲ್ಲಿರುವ ಸಕ್ಕರೆಯನ್ನು ಹರಾಜು ಹಾಕಿಯಾದರೂ ರೈತ ಬಾಕಿ ಹಣವನ್ನು ನೀಡಿ ಎಂದು ಆದೇಶ ನೀಡಿದ್ದರು. ಸಿಎಂ ಸೂಚನೆ ಮೇರೆಗೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸಕ್ಕರೆ ಕಾರ್ಖಾನೆಗಳ ಮೇಲೆ ದಾಳಿ ನಡೆಸಿ ಸಕ್ಕರೆ ಜಪ್ತಿ ಮಾಡಿ ಕಾರ್ಖಾನೆಗೆ ಬೀಗ ಮುದ್ರೆ ಜಡಿಯುತ್ತಿದ್ದಾರೆ. ಇದರಿಂದ ಎಚ್ಚತ್ತ ಕೆಲ ಸಕ್ಕರೆ ಕಾರ್ಖಾನೆ ಮಾಲೀಕರು ಸ್ವಯಂ ಪ್ರೇರಿತರಾಗಿ ಬಾಕಿ ಹಣವನ್ನು ನೀಡಲು ಮುಂದಾಗಿದ್ದಾರೆ.