ಬೆಂಗಳೂರು: ಬಿಜೆಪಿ (BJP) ಭಿನ್ನಮತಕ್ಕೆ ನಮ್ಮವರೇ ಹಿಂಬಾಗಿಲ ಮೂಲಕ ಕುಮ್ಮಕ್ಕು ಕೊಡ್ತಿದ್ದಾರೆ ಎಂದು ಶಾಸಕ ಮುನಿರತ್ನ (Munirathna) ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಸುದ್ದಿಗಾರರೊಂದಿಗೆ ಅವರು ಮಾತಾಡಿದರು. ಈ ವೇಳೆ, ಕಿತ್ತಾಟ ಶಮನವಾಗೋದು ನಮ್ಮ ಪಕ್ಷದ ಕೆಲವರಿಗೆ ಇಷ್ಟವಿಲ್ಲ. ಗಲಾಟೆ ನಿಲ್ಲಿಸಬೇಡಿ ಮುಂದುವರೆಸಿ ಅಂತ ಎತ್ತಿ ಕಟ್ಟುವ ಕೆಲಸ ಮಾಡ್ತಿದ್ದಾರೆ. ಅಲ್ಲೂ ಹೇಳೋದು ಇಲ್ಲೂ ಹೇಳೋದು ಮಾಡುವ ಮೂಲಕ ಗೊಂದಲವನ್ನು ಜೀವಂತವಾಗಿ ಇಡೋ ಕೆಲಸ ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಪಕ್ಷ ನಾಯಕ ಆರ್ ಅಶೋಕ್ (R.Ashok) ಬಗ್ಗೆಯೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿರಿಯರೂ, ವಿಪಕ್ಷ ನಾಯಕ ಸ್ಥಾನದಲ್ಲೂ ಇರುವ ಅಶೋಕ್ ಅವರು ಪಕ್ಷದ ಗೊಂದಲಗಳನ್ನು ನೋಡಿಕೊಂಡು ತಟಸ್ಥರಾಗಿರೋದು ಸರಿಯಲ್ಲ. ಹಿರಿಯರಾಗಿರುವ ಅವರು, ಎಲ್ಲಾ ಶಾಸಕರ ಸಭೆ ಕರೆದು ಗೊಂದಲ, ಸಮಸ್ಯೆ ಬಗೆಹರಿಸಬೇಕು. ಆಗಲೇ ಅವರಿಗೂ ಅವರ ಹುದ್ದೆಗೂ ಗೌರವ, ಅವರಿಗೆ ಮಧ್ಯಸ್ಥಿಕೆ ವಹಿಸಿ ಕಲಹ ಬಗೆಹರಿಸುವ ಅಧಿಕಾರ ಇದೆ ಎಂದಿದ್ದಾರೆ.
ನಾವು ಒಗ್ಗಟ್ಟು ಕಾಯ್ದುಕೊಳ್ಳದಿದ್ದರೆ ಪಕ್ಷಕ್ಕೆ ಕಷ್ಟ ಕಟ್ಟಿಟ್ಟ ಬುತ್ತಿ. ನಮ್ಮಲ್ಲಿ ಒಗ್ಗಟ್ಟು ಬಂದರೆ ರಾಜ್ಯದಲ್ಲೂ ದೆಹಲಿಯಂತೆ ಕಾಂಗ್ರೆಸ್‍ನ್ನು ಶೂನ್ಯಕ್ಕೆ ಇಳಿಸುವ ಸಾಮಥ್ರ್ಯ ಪಕ್ಷಕ್ಕೆ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.